ಬೆಂಗಳೂರು,ಡಿ.11- ಹಿಂದು ಯುವತಿಯರು,ಮಹಿಳೆಯರು ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಯಮಹಲ್ ನ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಇಂದು ಭೇಟಿ ಮಾಡಿದ ಹಿಂದುಪರ ಸಂಘಟನೆಗಳ ನಿಯೋಗದ ಮನವಿ ಸ್ವೀಕರಿಸಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಜತೆಗೆ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವವಹಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೂ ಲವ್ ಜಿಹಾದ್ ಅವ್ಯಾಹತವಾಗಿ ನಡೆದಿದ್ದು, ಉತ್ತರಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರೋಧಿ ವಿಶೇಷ ದಳ ರಚಿಸಲು ಹಿಂದೂ ಜನಜಾಗೃತಿ ಸಮಿತಿ ಇನ್ನಿತರ ಸಂಘಟನೆಗಳು ಮನವಿ ಮಾಡಿದವು.
ರಾಷ್ಟ್ರೀಯ ತನಿಖಾ ದಳದ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳ ಪ್ರಕಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಶಾಹೀನ್ ಗ್ಯಾಂಗ್ ಸಕ್ರಿಯವಾಗಿದ್ದು, ಕೆಲವು ಮೌಲ್ವಿಗಳು ಹಾಗೂ ಮದರಸಾಗಳು ಲವ್ ಜಿಹಾದ್ಗೆ ಸಾಥ್ ನೀಡಿವೆ ಎಂದು ಈ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿವೆ.
ನಿಯೋಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ, ರಣರಾಗಿಣಿ ತಂಡದ ಭವ್ಯಾಗೌಡ, ದುರ್ಗಾಸೇನೆಯ ನಂದಿನಿ ನಾಗರಾಜ್, ಶ್ರೀರಾಮಸೇನೆಯ ಸುಂದರೇಶ್, ಅಮರನಾಥ್ ಇದ್ದರು.
Previous Articleಭಯದಿಂದ ತತ್ತರಿಸಿದ ಸಿದ್ದರಾಮಯ್ಯ
Next Article ರಶ್ಮಿಕಾ ಮಂದಣ್ಣ ಬ್ಯಾನ್ ಅಂತೆ..! ಯಾಕಂತೆ..? ಹೇಗಂತೆ..?