ವಿಜಯಪುರ,ಡಿ.13:
ಕಾನೂನು ಕೈಗೆತ್ತಿಕೊಂಡು ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ, ಸರ್ಕಾರ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಂಡಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಬಲವಾಗಿ ಸಮರ್ಪಿಸಿದ ಅವರು ಪ್ರತಿಭಟನಾಕಾರರು
ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಕೆಲ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ಹೊಡೆದಿರುವುದಕ್ಕೆ ಸಾಕ್ಷಿ ಇದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ
ಪ್ರತಿಭಟನಾಕಾರರು ಕಲ್ಲು ಹೊಡೆದಿರುವುದಕ್ಕೆ, ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗುವುದಕ್ಕೆ ಸಾಕ್ಷಿಯಾಗಿ ಫೋಟೋಗಳಿವೆ ಎಂದು ಹೇಳಿದರು.
ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು. ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ ? ಎಂದು ಪ್ರಶ್ನಿಸಿದ ಅವರು, ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಪಂಚಮಸಾಲಿ ಹೋರಾಟಗಾರರು ಟ್ರ್ಯಾಕ್ಟರ್ ತರುವ ಮೂಲಕ ಹೋರಾಟ ಮಾಡುತ್ತೇವೆ ಎಂದು ಮೊದಲೇ ತಿಳಿಸಿದ್ದರು. ಕೋರ್ಟ್ ಹೋರಾಟವನ್ನು ಶಾಂತಿಯುತವಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಸೂಚನೆ ನೀಡಿತ್ತು. ಆದರೆ, ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸ್ಥಳಕ್ಕೆ ಮಹದೇವಪ್ಪ ಸೇರಿದಂತೆ ಮೂರು ಸಚಿವರನ್ನು ಕಳುಹಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.
ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2 ಎ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು