ಬೆಂಗಳೂರು,ಸೆ.20-
ತಮ್ಮ ನಿಗಧಿತ ಆದಾಯ ಮೂರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹೊಂದಿರುವ
ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ರಾಜ್ಯ ಲೋಕಾಯುಕ್ತ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದೆ.
ಈ ಮೂಲಕ ಭ್ರಷ್ಟ ಅಧಿಕಾರಿಗಳ ಪಾಲಿಗೆ ಲೋಕಾಯುಕ್ತ ಸಿಂಹ ಸ್ವಪ್ನವಾಗಿದೆ.ಅದರಲ್ಲೂ ಲೋಕಾಯುಕ್ತ ಮುಖ್ಯಸ್ಥರಾಗಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮತ್ತು ದಿವಂಗತ ವೆಂಕಟಾಚಲ ಅವರು ಮಾಡಿದ ಕೆಲಸವನ್ನು ಇಡೀ ದೇಶವೇ ನಿಬ್ಬೆರಗಾಗಿ ನೋಡಿತು.ಈ ಮೂಲಕ ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿಯಾಯಿತು.
ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಲೋಕಾಯುಕ್ತ ಹಿಂದಿನ ಮೊನಚು ಕಳೆದುಕೊಂಡಿದೆಯಾದರೂ ಆಗಿಂದಾಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಸುದ್ದಿ ಮಾಡುತ್ತಿದೆ.ಇದು ಕೇವಲ ಸುದ್ದಿಗೆ ಸೀಮಿತವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಲೋಕಾಯುಕ್ತದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು.
ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಲೋಕಾಯುಕ್ತ ಅಧಿಕಾರಿಗಳು ಆನಂತರ ಈ ಪ್ರಕರಣಗಳ ವಿಲೇವಾರಿಗೆ ಕೊಡಬೇಕಾದಷ್ಟು ಪ್ರಾತಿನಿಧ್ಯ ಕೊಡದ ಪರಿಣಾಮ ಹಾಗೂ ತನಿಖೆಗೆ ಬೇಕಾದ ವಿವಿಧ ಅನುಮತಿಗಳು ದೊರಕುವುದು ವಿಳಂಬವಾದ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ವಿಲೇವಾರಿಯಾಗದೇ ಸಾವಿರಾರು ಕೇಸ್‌ಗಳು ಬಾಕಿ ಉಳಿದಿವೆ.
ಲೋಕಾಯುಕ್ತದಲ್ಲಿ 18 ಸಾವಿರಕ್ಕೂ ಹೆಚ್ಚು ಕೇಸ್‌ಗಳು ವಿಚಾರಣೆ ಆಗದೇ, ಕಡತಗಳು ಮೂಲೆ ಸೇರಿವೆ.
ಕಳೆದ ಜುಲೈ ತಿಂಗಳ ಅಂತ್ಯದವರೆಗೆ 18 ಸಾವಿರ ಕೇಸ್‌ಗಳು ಲೋಕಾಯುಕ್ತದದಲ್ಲಿ ಬಾಕಿಯಿವೆ ಎಂದು ಪ್ರಕರಣ ವಿವರಗಳಿಂದ ತಿಳಿದುಬಂದಿದೆ.
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದಾದ ಬಳಿಕ ಎಲ್ಲಾ ಕೇಸ್‌ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದಾಖಲಾದ ಕೇಸ್‌ಗಳ ಪೈಕಿ ಸುಮಾರು 18 ಸಾವಿರ ಕೇಸ್‌ಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ದೂರು ದಾಖಲಾಗಿದ್ದರೂ ಕೆಲವು ಕಾರಣಗಳಿಂದ ವಿಚಾರಣೆ ಬಾಕಿ ಉಳಿದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬಾಕಿ ಕೇಸ್ ವಿವರ:
ಲೋಕಾಯುಕ್ತ- 5495 ಕೇಸ್
ಉಪ ಲೋಕಾಯುಕ್ತ 1- 7028 ಕೇಸ್
ಉಪ ಲೋಕಾಯುಕ್ತ 2- 6363 ಕೇಸ್
ಒಟ್ಟು 18,886 ಕೇಸ್ ಬಾಕಿ