ಬೆಂಗಳೂರು:
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು “ಕೊಟ್ಟ ಮಾತು ಉಳಿಸಿಕೊಳ್ಳುವುದೇ ನಿಜವಾದ ಶಕ್ತಿ” ಅದರಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.
“ಕಾಂಗ್ರೆಸ್ ಕಾರ್ಯಕರ್ತರ ಎದೆಯ ಮೇಲೆ ತ್ರಿವರ್ಣ ಧ್ವಜ, ಎದೆಯೊಳಗೆ ಸಂವಿಧಾನವಿದೆ” ಎಂದ ಶಿವಕುಮಾರ್ ಅವರು, ಗಾಂಧೀಜಿ ನೇತೃತ್ವದ 1924ರ ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ನಡೆದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಕಾರ್ಯಕ್ರಮವನ್ನು ನೆನಪಿಸಿಕೊಂಡರು.
ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆಗೊಳ್ಳಲಿರುವ ಗಾಂಧಿ ಭಾರತ ಪುಸ್ತಕ 95% ಪೂರ್ಣಗೊಂಡಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಲೀಗಲ್ ಬ್ಯಾಂಕ್ ರಚನೆಗೆ ಸೂಚಿಸಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 10 ಮಂದಿ ವಕೀಲರನ್ನು ನೇಮಿಸಿ, ಕಾಂಗ್ರೆಸ್ ಕಾರ್ಯಕರ್ತರ ಹಕ್ಕು ರಕ್ಷಣೆಗೆ ಹಾಗೂ ಪಕ್ಷದ ಸಿದ್ಧಾಂತಗಳ ಪಾಲನೆಗೆ ಇವರನ್ನು ಬಳಕೆ ಮಾಡುವುದಾಗಿ ಘೋಷಿಸಿದರು.
“ವಕೀಲರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೇಲೆ ವಾದ ಮಂಡಿಸುತ್ತಾರೆ. ಇವುಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ” ಎಂದು ಹೇಳಿದರು.
ವಿದ್ಯಾರ್ಥಿ ನಾಯಕತ್ವ ಕುಗ್ಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ ಅವರ ಸಲಹೆಯಂತೆ ಕಾಲೇಜು ಚುನಾವಣೆ ಕುರಿತು ಅಧ್ಯಯನ ಸಮಿತಿ ರಚಿಸುವುದಾಗಿ ತಿಳಿಸಿದರು.
“ಐದು ಬೆರಳು ಸೇರಿ ಕೈ ಮುಷ್ಟಿಯಾದಂತೆ, ಐದು ಗ್ಯಾರಂಟಿಗಳಿಂದ ಕೈ ಗಟ್ಟಿಯಾಗಿದೆ. ಕಾಂಗ್ರೆಸ್ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸಮಾನತೆ ಹಾಗೂ ಗ್ಯಾರಂಟಿಗಳ ಮೂಲಕ ಜನರ ಬದುಕಿಗೆ ರಕ್ಷಣೆ ನೀಡಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

