ಬೆಂಗಳೂರು: ಶಿವಮೊಗ್ಗದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ವಜಾ ಮಾಡಿ, ಬಂಧಿಸಿ ತನಿಖೆ ನಡೆಸುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಗ್ರಹಿಸಿದರು.
ಮಸ್ಕಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟ್‍ನಲ್ಲಿ, ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಾದ 187 ಕೋಟಿ ರೂ.ಗಳನ್ನು ಸಚಿವರ ಸೂಚನೆ ಮೇರೆಗೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಅವ್ಯವಹಾರ ನಡೆಸಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ನಿಗಮದ ಆಡಳಿತ ನಿರ್ದೇಶಕ ಹಾಗೂ ಅಧಿಕಾರಿಗಳು ನಕಲಿ ಖಾತೆಗಳನ್ನು ತೆರೆದು ಈ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಎಲ್ಲರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇರೆ ಅಗತ್ಯವಿಲ್ಲ. ಅಂದು ಬಿಜೆಪಿ ಸರಕಾರವಿದ್ದಾಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ವಿಪಕ್ಷ ನಾಯಕ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಿನ ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪನವರ ವಜಾಕ್ಕೆ ಆಗ್ರಹಿಸಿದ್ದರು. ಕಾನೂನು, ಸಂವಿಧಾನ ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತ ಭಾರೀ ಗದ್ದಲವೆಬ್ಬಿಸಿದ್ದರು. ಈಗ ಅವರದೇ ಸರಕಾರವಿದೆ. ಅದೇ ಮಾತುಗಳನ್ನು ಈಗ ಹೇಳಲಿ ನೋಡೋಣ ಎಂದು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಮತ್ತು ಇಲಾಖೆಯ ಆಪಾದಿತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.