ಬೆಂಗಳೂರು,ಆ.30 -ವಾಲ್ಮೀಕಿ ಸಮುದಾಯಕ್ಕೆ ಅತಿ ಶೀಘ್ರದಲ್ಲೇ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಮೂಲಕ ಸಮುದಾಯದ ಬಹುದಿನಗಳ ಬೇಡಿಕೆಯಾದ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ ಎಂಬ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ.ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಮುಲು ಅವರು, ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ.
ಸುಭಾಷ್ ಆಡಿಯ ನೇತೃತ್ವದ ತ್ರಿಸದಸ್ಯ ಸಮಿತಿಯು ನೀಡಿರುವ ವರದಿ ಸರ್ಕಾರದ ಪರಿಶೀಲನಾ ಹಂತದಲ್ಲಿದೆ. ಅದಷ್ಟು ಶೀಘ್ರ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿಯನ್ನು ನಮ್ಮ ಸರ್ಕಾರವೇ ಕೊಡಲಿದೆ ಎಂಬುದನ್ನು ಉಲ್ಲೇಖ ಮಾಡಿದ್ದಾರೆ.
ಈ ಬಗ್ಗೆ ಯಾರಿಗೂ ಸಂಶಯವೇ ಬೇಡ. ಮೀಸಲಾತಿ ಸಂಬಂಧ ನಾನು ಹೇಳಿರುವ ಮಾತಿನಿಂದ ಒಂದು ಕಂಚು ಹಿಂದೆ ಸರಿಯಲ್ಲ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಎಂದು ತಾವು ವಾಲ್ಮೀಕಿ ಸಮುದಾಯಕ್ಕೆ ನೀಡಿದ್ದ ಭರವಸೆಯನ್ನು ನೆನಪಿಸಿದ್ದಾರೆ.
ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.