ಬೆಂಗಳೂರು,ಜು.17 :
ದಲಿತರಿಗೆ ಉನ್ನತ ಹುದ್ದೆ ನೀಡುವ ನಿಟ್ಟಿನಲ್ಲಿ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಘೋಷಿಸಲಿ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ
ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.
ವಿಜಯೇಂದ್ರ ಅವರಿಗೆ ಓದುವ ಅಭ್ಯಾಸ ಇದ್ದರೆ ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ ಎಂದಿದ್ದಾರೆ.
ಬಂಗಾರು ಲಕ್ಷ್ಮಣ್ ಎಂಬ ಅಮಾಯಕ ದಲಿತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದು ಮಾತ್ರವಲ್ಲ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿ ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ? ಎ.ಪಿ.ಜೆ ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿರುವ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಯಾಕೆ ಇಲ್ಲ? ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ? ಎಂದು ಕೇಳಿದ್ದಾರೆ.
ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್.ಬಂಗಾರಪ್ಪನವರೇ ಸಾಕ್ಷಿ. ಬಂಗಾರಪ್ಪನವರನ್ನು ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ ಎಂದು ಆಪಾದಿಸಿದ್ದಾರೆ
ಬಂಗಾರಪ್ಪನವರಿರಲಿ, ನರೇಂದ್ರ ಮೋದಿ ಅವರೇ ಇರಲಿ, ಎಲ್ಲಿಯ ವರೆಗೆ ಇವರು ವರ್ಣವ್ಯವಸ್ಥೆ ಆಧಾರಿತ ಹಿಂದುತ್ವದ ಅಜೆಂಡಾಕ್ಕೆ ತಲೆ ಬಗ್ಗಿಸುತ್ತಾ ಇರುತ್ತಾರೋ ಅಲ್ಲಿಯ ವರೆಗೆ ಮಾತ್ರ ಅವರ ತಲೆಗಳು ಸುರಕ್ಷಿತ. ಇದು ಮೋದಿಯವರಿಗೂ ತಿಳಿದಿರಲಿ ಎಂದು ಕುಟುಕಿದ್ದಾರೆ.
ವಿಜಯೇಂದ್ರ ಅವರೇ, ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ. ನಿಮಗೆ ಅನುಕೂಲವಾಗಲೆಂದು ಆ ಹೆಸರನ್ನು ನಾನೇ ಸೂಚಿಸುತ್ತೇನೆ ಎಂದು ಗೋವಿಂದ ಕಾರಜೋಳ ಅವರ ಹೆಸರು ಹೇಳಿದ್ದಾರೆ.
ಬೇರೆ ಪಕ್ಷಗಳಲ್ಲಿನ ದಲಿತ ನಾಯಕರ ಚಾರಿತ್ರ್ಯಹನನ ಮಾಡಲಷ್ಟೇ ಬಿಜೆಪಿ ತನ್ನ ದಲಿತ ನಾಯಕರನ್ನು ಬಳಸಿಕೊಳ್ಳುತ್ತದೆಯೇ ಹೊರತು, ಅವರಿಗೆ ಯಾವುದೇ ಗೌರವದ ಮತ್ತು ಪ್ರಮುಖ ಸ್ಥಾನಮಾನ ನೀಡುವುದಿಲ್ಲ. ವಿಜಯೇಂದ್ರ ಅವರೇ, ಛಲವಾದಿ ನಾರಾಯಣ ಸ್ವಾಮಿ ಅವರ ತಲೆ ಮೇಲೆ ಚಡ್ಡಿತುಂಬಿದ ಬುಟ್ಟಿಹೊರಿಸಿ ಕಳಿಸುವ ಬದಲಿಗೆ ನೀವು ಮತ್ತು ನಿಮ್ಮ ತಂದೆಯವರು ಯಾಕೆ ಅದನ್ನು ಹೊತ್ತುಕೊಂಡು ಹೋಗಿಲ್ಲ? ಇದಕ್ಕೆ ಉತ್ತರ ಇದೆಯಾ ನಿಮ್ಮಲ್ಲಿ? ಎಂದು ಪ್ರಶ್ನಿಸಿದ್ದಾರೆ.
Previous Articleಪರಪ್ಪನ ಅಗ್ರಹಾರ ಜೈಲಿನಿಂದ ನೇಮಕಾತಿ
Next Article RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್