ಬೆಂಗಳೂರು,ಆ.11:
ನಿವೇಶನ ಹಂಚಿಕೆ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ ಬಿಜೆಪಿಯಲ್ಲಿ ಇದೀಗ ಭಿನ್ನ ಮತ ತೀವ್ರಗೊಂಡಿದೆ.
ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಪಾದಯಾತ್ರೆ ಮುಗಿದ ಬೆನ್ನಲ್ಲೇ ಕಮಲ ಪಾಳಯದ ಭಿನ್ನಮತಿಯ ಚಟುವಟಿಕೆಗಳು ಹಠಾತ್ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇದೀಗ ಪಕ್ಷದ ಅಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಲು ಬಂಡುಕೋರ ನಾಯಕರು ತೀರ್ಮಾನಿಸಿದ್ದಾರೆ.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬೆಳಗಾವಿ ಹೊರವಲಯದ ಕಿಣಿಯೇ ಗ್ರಾಮದ ರೆಸಾರ್ಟ್ ನಲ್ಲಿ ಸಭೆ ಸೇರಿದ ಭಿನ್ನಮತಿಯ ನಾಯಕರು ಬೆಂಗಳೂರು ಮೈಸೂರು ಪಾದಯಾತ್ರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಏಕ ವ್ಯಕ್ತಿಯ ವೈಭವೀಕರಣಕ್ಕಾಗಿ ನಡೆದ ಈ ಯಾತ್ರೆಯಿಂದ ಪಕ್ಷಕ್ಕೆ ಲಾಭವಾಗುವ ಬದಲು ದೊಡ್ಡ ಹೊಡೆತ ಬಿದ್ದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾಜಿ ಸಂಸದರಾದ ಅಣ್ಣ ಸಾಹೇಬ್ ಜೊಲ್ಲೆ , ಪ್ರತಾಪ್ ಸಿಂಹ ಬಸನಗೌಡ ಪಾಟೀಲ್ ಯತ್ನಾಳ್, ಜಿಎಂ ಸಿದ್ದೇಶ್ವರ್ ಶಾಸಕರಾದ ಬಿಪಿ ಹರೀಶ್ ಸೇರಿದಂತೆ ಹಲವರು ಇದೀಗ ವಿಜಯೇಂದ್ರ ಅವರನ್ನು ಬದಲಾಯಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಏರಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಚುನಾಯಿತ ಅಧ್ಯಕ್ಷರಲ್ಲ ಅವರನ್ನು ನಾಮಕರಣ ಮಾಡಲಾಗಿದೆ. ಅಲ್ಲದೆ ಅವರ ಅವಧಿ ಕೂಡ ಪೂರ್ಣಗೊಂಡಿದೆ. ಹೀಗಾಗಿ ತಕ್ಷಣವೇ ಅವರನ್ನು ಬದಲಾಯಿಸಿ ನೂತನ ಅಧ್ಯಕ್ಷರನ್ನು Election ಮೂಲಕ ಆಯ್ಕೆ ಮಾಡಬೇಕು ಸದ್ಯ ಪಕ್ಷ ಸಂಪೂರ್ಣ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿದೆ ಎಂಬ ಅಂಶವನ್ನು ಹೈಕಮಾಂಡ್ ಗಮನಕ್ಕೆ ತರಲು ಈ ನಾಯಕರು ನಿರ್ಧರಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮೈಸೂರು ಚಲೋ ಪಾದಯಾತ್ರೆ, ಪಕ್ಷಕ್ಕೆ ಯಾವುದೇ ಲಾಭ ತಂದು ಕೊಟ್ಟಿಲ್ಲ ಅದರ ಬದಲಿಗೆ ಜೆಡಿಎಸ್ ಕೊಂಚಮಟ್ಟಿಗೆ ಬಲಯುತಗೊಂಡಿದೆ ಮುಖ್ಯಮಂತ್ರಿ ರಾಜೀನಾಮೆ ಒತ್ತಾಯಿಸಿ ಆರಂಭಗೊಂಡ ಈ ಪಾದಯಾತ್ರೆ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ವೈಯಕ್ತಿಕ ಸಂಘರ್ಷದ ಯಾತ್ರೆಯಾಗಿ ಪರಿಣಮಿಸಿತು ಯಾತ್ರೆ ಸಾಗುತ್ತಿದ್ದಂತೆ ತನ್ನ ಉದ್ದೇಶವನ್ನೇ ಬದಲಾಯಿಸಿ ವೈಯಕ್ತಿಕ ಆರೋಪ ಪ್ರತ್ಯಾರೋಪದಲ್ಲಿ ಕುಮಾರಸ್ವಾಮಿ ಯಡ್ಯೂರಪ್ಪ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರತರಾದರು ಇದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಅಭಿಪ್ರಾಯಪಟ್ಟಿರುವುದಾಗಿ ಗೊತ್ತಾಗಿದೆ.
ಈ ಪಾದಯಾತ್ರೆಯಿಂದ ಕಾರ್ಯಕರ್ತರು ಬೇಸರಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಮತ್ತೊಂದು ಪಾದಯಾತ್ರೆ ಮಾಡಬೇಕು ಎಂದು ಈ ನಾಯಕರು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಳ್ಳಾರಿಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸಬೇಕು ಪಕ್ಷದಲ್ಲಿ ಉಂಟಾಗಿರುವ ಎಲ್ಲ ವಿದ್ಯಮಾನಗಳನ್ನು ಹೈಕಮಾಂಡ್ ಗೆ ತಿಳಿಸಲು ಸದ್ಯದಲ್ಲೇ ಈ ಎಲ್ಲ ನಾಯಕರ ನಿಯೋಗ ದೆಹಲಿಗೆ ತೆರಳುವ ತೀರ್ಮಾನ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ