ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷ ಸರಳವಾಗಿ ಆಚರಿಸಲಾಗಿದ್ದ ಐತಿಹಾಸಿಕ ಕರಗ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಿತು. ಆರಗ ಜ್ಞಾನೇಂದ್ರ ಅವರು ಹೂವಿನ ಕರಗ ಹೊತ್ತು ವೀರಕುಮಾರರ ಬೆಂಗಾವಲಿನಲ್ಲಿ ಸಾಗಿಬಂದರು. ಹಲಸೂರುಪೇಟೆ ಆಂಜನೇಯ ಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣಗಲ್ಲಿಯ ಭೈರೇದೇವರ ದೇವಸ್ಥಾನ, ಕಬ್ಬನ್ ಪೇಟೆಯ ರಾಮಸೇವಾ ಮಂದಿರ, ಮಕ್ಕಳ ಬಸವನಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಿತು.
ಸರ್ವ ಧರ್ಮಗಳ ಭಾವೈಕ್ಯತೆಯ ಸಂಗಮವಾಗಿರುವ ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾ ಕರಗ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಹೂವಿನ ಕರಗ ದರ್ಗಾದೊಳಕ್ಕೆ ಪ್ರವೇಶಿಸಿ ಮುಂದಕ್ಕೆ ಸಾಗಿತು.
ಕರಗ ಹಿನ್ನಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನವನ್ನು ಮಲ್ಲಿಗೆ ಹೂವಿನಿಂದ ಶೃಂಗರಿಸಲಾಗಿತ್ತು. ಕರಗ ಸಾಗುವ ದಾರಿಯುದ್ದಕ್ಕೂ ಸ್ವಚ್ಚಗೊಳಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಪ್ರತಿ ವರ್ಷ ನಡೆಯುವ ಹೂವಿನ ಕರಗ ಉತ್ಸವ ನಗರ್ತಪೇಟೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ದೇವಸ್ಥಾನಗಳು, ಕಟ್ಟಡಗಳನ್ನು ಸಂಪೂ-ರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.