ಬೆಂಗಳೂರು,ಜ.16:
ನಾಯಕತ್ವ ಬದಲಾವಣೆ ಕುರಿತಂತೆ ಬಹಿರಂಗ ಹೇಳಿಕೆ ನೀಡಿದಂತೆ ಪಕ್ಷ ಕಟ್ಟಪ್ಪಣೆ ವಿಧಿಸಿದರೂ ಸೊಪ್ಪು ಹಾಕದ ಕಾಂಗ್ರೆಸ್ ನಾಯಕರು ಪ್ರದೇಶ ಕಾಂಗ್ರೆಸ್ ಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು ಎಂಬ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ವಾದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬಹಿರಂಗ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ಅವರಿಗೆ ಪಕ್ಷ ನೋಟಿಸ್ ನೀಡಿದೆ ಎನ್ನಲಾಗಿದ್ದು ಅದಕ್ಕೆ ತಾವು ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದರ ನಡುವೆ, ಪ್ರದೇಶ ಕಾಂಗ್ರೆಸ್ಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಇರಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಂದುವರೆಯುತ್ತಾರೆಂದು ಪಕ್ಷದ ಹೈಕಮಾಂಡ್ ಹೇಳಿದರೆ ಒಪ್ಪುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವುದರಲ್ಲಿ ತಪ್ಪು ಹುಡುಕಬಾರದು. ಸತೀಶ್ ಜಾರಕಿಹೋಳಿ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದರು.
ಲೋಕಸಭಾ Election ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕೆಂದು ಹೇಳಿದ್ದ ಹಿನ್ನೆಲೆಯಲ್ಲಿ ಗೊಂದಲವಾಗಿದೆ. ಯಾರಿಗಾದರೂ ಅಧ್ಯಕ್ಷ ಸ್ಥಾನ ಕೊಡಲಿ ನಮ್ಮ ಅಭ್ಯಂತರವಿಲ್ಲ. ಪೂರ್ಣ ಪ್ರಮಾಣದ ಅಧ್ಯಕ್ಷರಾದರೆ ಸರಿ ಆಗುತ್ತದೆ. ಲೋಕಸಭಾ ಚುನಾವಣೆ ನಡೆದು 6 ತಿಂಗಳು ಆಗಿದೆ. ಹೈಕಮಾಂಡ್ ನಾಯಕರೇ ಗೊಂದಲ ಮಾಡಿದ್ದು, ಅವರೇ ನಿವಾರಣೆ ಮಾಡಬೇಕು ಎಂದು ಅವರು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಅವರ ನಾಯಕತ್ವದಲ್ಲೇ ಹೋಗುತ್ತೇವೆ ಎಂದು ಹೇಳಲಿ. ಆದರೆ, ಮೊದಲು ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾದರೆ ಸಂತೋಷ. ಜನ ಪರ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಿಗುತ್ತಾರೆ ಮತ್ತು ಎಲ್ಲರಿಗೂ ಗೌರವ ಕೊಡುತ್ತಾರೆ. ಅಂಥವರು ಅಧ್ಯಕ್ಷರಾದರೆ ನಾನು ಸ್ವಾಗತ ಮಾಡುತ್ತೇನೆ ಎಂದರು.
ಪರಮೇಶ್ವರ್ ಬೆಂಬಲ:
ಗೃಹ ಮಂತ್ರಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆಗೆ ಬೆಂಬಲ ನೀಡುವಂತೆ ಮಾತನಾಡಿದರು. ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಬಳಿ ಎರಡು ಪ್ರಬಲ ಖಾತೆಗಳಿವೆ. ಪಕ್ಷದ ಅಧ್ಯಕ್ಷ ಸ್ಥಾನವೂ ಇದೆ. ಹೀಗಾಗಿ ಕಾರ್ಯಭಾರ ಹೆಚ್ಚಿರುತ್ತದೆ. ಬದಲಾವಣೆ ಮಾಡಿ ಎಂಬ ಹೇಳಿಕೆ ಸಹಜವಾಗಿ ಕೇಳಿಬರುತ್ತದೆ ಎಂದಿದ್ದಾರೆ.
ಈ ಮೊದಲು ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ಪರಿಸ್ಥಿತಿ ಉದ್ಭವಿಸಿತ್ತು. ಅಂದು ಸಚಿವ ಸ್ಥಾನ ಅಥವಾ ಅಧ್ಯಕ್ಷ ಸ್ಥಾನ ಎರಡರಲ್ಲಿ ಒಂದನ್ನು ಉಳಿಸಿಕೊಳ್ಳಿ ಎಂದು ನಮ್ಮ ಮುಂದೆ ಆಯ್ಕೆ ಇಡಲಾಗಿತ್ತು. ನಾನು ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗಲೂ ಅದನ್ನೇ ಬಯಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ಇರುತ್ತದೆ.ತಾವು ಸಮುದಾಯದ ಕಷ್ಟಸುಖಗಳನ್ನು ಚರ್ಚೆ ಮಾಡಲು ಸಭೆ ಕರೆಯುವುದನ್ನು ಗಮನಿಸುವ ಹೈಕಮಾಂಡ್ ,ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿಬರುತ್ತಿರುವ ಕೂಗುಗಳನ್ನು ಗಮನಿಸಿರುವುದಿಲ್ಲವೇ ಎಂದು ಪ್ರಶ್ನಿಸಿದರು.
ಉತ್ತರ ಕೊಡುತ್ತೇನೆ:
ಪಕ್ಷದ ವಿದ್ಯಮಾನಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ತಮಗೆ ಕೆಪಿಸಿಸಿಯಿಂದ ನೋಟೀಸ್ ನೀಡಿದಾಕ್ಷಣ ದೊಡ್ಡ ಅನಾಹುತವೇನೂ ಆಗುವುದಿಲ್ಲ, ಪಕ್ಷದ ಅಧ್ಯಕ್ಷರಿಗೆ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನೋಟಿಸ್ ಕೊಟ್ಟರೆ ಅದರಿಂದ ಅನಾಹುತವೇನೂ ಆಗುವುದಿಲ್ಲ, ನೋಟಿಸ್ ಕೊಡುವ ಅಧಿಕಾರ ಅವರಿಗಿದೆ, ನಾನು ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ, ನಾನು ಅರ್ಧಗಂಟೆ ಮಾಧ್ಯಮದವರ ಜೊತೆ ಮಾತನಾಡಿರುವ ವಿಡಿಯೋ ಸಾಕ್ಷ್ಯ ಕೂಡ ನನ್ನ ಬಳಿ ಇದೆ. ಅದನ್ನೇ ಆಧಾರವಾಗಿಟ್ಟುಕೊಂಡು ಉತ್ತರ ನೀಡುತ್ತೇನೆ ಎಂದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಹಜವಾಗಿ ಮಾತನಾಡಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗೂ ನೋವಾಗಿಲ್ಲ. ನಾನು ಹೇಳಿದ್ದನ್ನು ಬೇರೆ ರೀತಿಯೇ ತಿರುಚಲಾಗಿದೆ. ನೋಟಿಸ್ ಕೊಟ್ಟಿರುವುದಕ್ಕೆ ಉತ್ತರ ಕೊಡುತ್ತೇನೆ ಎಂದು ಅವರು ತಿಳಿಸಿದರು
ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಹೇಳಿದ್ದನ್ನು ಬೇರೆ ರೀತಿ ಬಿಂಬಿಸಿ ಪಕ್ಷದ ಅಧ್ಯಕ್ಷರ ಮುಂದೆ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಅವರು ನಾಲ್ಕು ಮಾತನಾಡುತ್ತಾರೆ. ತಿರುಗಿ ಅದೇ ರೀತಿಯ ಪ್ರಶ್ನೆಗಳನ್ನು ನನ್ನ ಬಳಿ ಕೇಳಲಾಗುತ್ತದೆ. ಈ ರೀತಿ ಪರಸ್ಪರ ಚರ್ಚೆಗಳು ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಹಾನಿಯಾಗುತ್ತದೆ. ನಾನು ಹೇಳಿದ್ದನ್ನು ಸೂಕ್ತವಾಗಿ ಜನರ ಮುಂದಿಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.