ಬೆಂಗಳೂರು, ಜೂ.13:
ಚುನಾವಣೆಯ ಕಾರಣಕ್ಕೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.ಹಲವಾರು ಸಮಸ್ಯೆಗಳಿಂದ ಜನರು ಪರಿತಪಿಸುತ್ತಿದ್ದು,ಇವುಗಳಿಗೆ ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.
ಬಹು ದಿನಗಳ ಬಿಡುವಿನ ನಂತರ ಸಂಪುಟ ಸಭೆ ನಡೆಸಿದ ಅವರು ಎಲ್ಲಾ ಸಚಿವರು ಜನ ಸ್ಪಂದನಾ ಕಾರ್ಯಕ್ರಮಗಳ ಮೂಲಕ ಜನರ ಅಹವಾಲು ಆಲಿಸಿ,ಅವುಗಳಿಗೆ ಪರಿಹಾರ ನೀಡಬೇಕು. ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ನೀಡುವಂತೆ ತಾಕೀತು ಮಾಡಿದರು
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್
ಹಿಂದಿನ ಸಚಿವ ಸಂಪುಟದಲ್ಲಿ 147 ಟೆಂಡರ್ ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲಾಗಿದೆ ಎನ್ನುವ ಅವಲೋಕನ ನಡೆಸಲಾಯಿತು.
ಇದರಲ್ಲಿ 94 ಪ್ರಸ್ತಾವಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 19 ಟೆಂಡರ್ ಪರಿಶೀಲನೆಯಲ್ಲಿವೆ. 18 ಟೆಂಡರ್ಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಟೆಂಡರ್ ಕಾಮಗಾರಿ ಮುಕ್ತಾಯಗೊಂಡಿದೆ. 53 ಟೆಂಡರ್ ಕರೆಯಲು ಬಾಕಿ ಇವೆ, ಸಂಪುಟ ಇವುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಅನುಮೋದನೆ ಕೊಟ್ಟಿರುವುದಕ್ಕೆಲ್ಲಾ ಟೆಂಡರ್ ಕರೆದು ಕೆಲಸ ಆರಂಭಿಸಲು ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ 2025 ಫೆಬ್ರವರಿ 12-14ರವರೆಗೆ ಇನ್ವೆಸ್ಟ್ ಕರ್ನಾಟಕ -2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ಸಚಿವ ಸಂಪುಟ ಅನುಮೋದಿಸಿದೆ. ಈಗಾಗಲೇ 25 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ 15 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿದೆ.
ಕಾರ್ಮಿಕ ಇಲಾಖೆಯಲ್ಲಿ ಇಎಸ್‍ಐ ನಲ್ಲಿ ಗುತ್ತಿಗೆ ವೈದ್ಯರ ವಿಲೀನ ಮಾಡುವ ಬಗ್ಗೆ ಚರ್ಚೆಯಾಗಿ ಮುಂದೂಡಲಾಗಿದೆ. ಕಾನೂನು ಸಲಹೆ ಪಡೆಯಲು ಸೂಚಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋಟಿ ರೂ.ಗಳ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
• ಸಾರಿಗೆ ಇಲಾಖೆಯಲ್ಲಿ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೊಸದಾಗಿ 112 ಪೂರ್ಣ ಕವಚ ನಿರ್ಮಿತ ಬಿಎಸ್. 4 ವೇಗದೂತ ಬಸ್ಸುಗಳನ್ನು 46.48 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಪ್ರಸ್ತಾವನೆಯನ್ನು ಸಚಿವ ಸಂಪುಟ ಒಪ್ಪಿದೆ. 62 ಹೊಸ ಬಸ್ಸುಗಳನ್ನು ಖರೀದಿಸಲು ಹಾಗೂ 50 ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
• ಗಣಿಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಮೆ: ಭಾರತ್ ಚಿನ್ನದ ಗಣಿ ಸಂಸ್ಥೆ, ಕೆ.ಜಿಎಫ್ ಅವರು ಪಡೆದಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಟೇಲಿಂಗ್ ಡಂಪ್ಸ್ ಗಳಿಗೆ ಎಂ.ಎಂ.ಡಿ.ಆರ್ ಕಾಯ್ದೆಯ ಕಲಂ 17 ರನ್ವಯ ಕೇಂದ್ರ ಸರ್ಕಾರದಿಂದ ಗಣಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾವನೆ ಇದ್ದು, ಹೆಚ್ಚಿನ ತಾಂತ್ರಿಕ ವಿವರಗಳು ಅಗತ್ಯವಿರುವುದರಿಂದ ಇದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
• ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗಾಗಿ Knowledge Partner ಆಯ್ಕೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇ-ಟೆಂಡರ್ ಕರೆದಿದ್ದು ಟೆಂಡರ್ ಪ್ರಕಾರ ಈಗಾಗಲೇ ಮೆ: ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈ ಲಿ., ಇವರನ್ನು ಜಿಎಸ್‍ಟಿ ಒಳಗೊಂಡಂತೆ 21 ಕೋಟಿ ರೂ. ವೆಚ್ಚದಲ್ಲಿ Knowledge Partner ಆಗಿ ನೇಮಕ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
• ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯಡಿ ರಾಜ್ಯದಲ್ಲಿ ಕಾನೂನು ಮತ್ತು ನೀತಿ ಗೆ ಅನುಮೋದನೆ ನೀಡುವ ಬಗ್ಗೆ ಎರಡು ಮೂರು ವಿಚಾರಗಳಲ್ಲಿ ಬದಲಾವಣೆ ಅಗತ್ಯವನ್ನು ಮನಗಂಡು ಮುಂದೂಡಲಾಗಿದೆ.