ಕರ್ನಾಟಕ : ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಪೊಲೀಸ್ ಸಬ್ ಇನ್ಸಪೆಕ್ಟರ್ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕಿಯೊಬ್ಬರು ಶಾಮೀಲಾಗಿರುವ ಸುದ್ದಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಬಿಜೆಪಿ ಸಂಸದರೊಬ್ಬರ ಪತ್ರವೊಂದು ಇದೀಗ ಹಗರಣಕ್ಕೆ ಹೊಸ ತಿರುವು ನೀಡಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರೊಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯನ್ನು ಕಲಬುರಗಿಯ ಜ್ಞಾನಜ್ಯೋತಿ ಕೇಂದ್ರಕ್ಕೆ ನೀಡಬೇಕೆಂದು ಶಿಫಾರಸು ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಈ ಪತ್ರ ಸಿಕ್ಕಿದ್ದು, ತನಿಖಾ ತಂಡ ಸಂಸದರ ಹೇಳಿಕೆ ಪಡೆಯುವ ಸಾಧ್ಯತೆಯಿದೆ. ಸಂಸದರು ಯಾಕಾಗಿ ಇಂತಹ ಶಿಪಾರಸ್ಸು ಪತ್ರ ನೀಡಿದರು. ಈ ಹಗರಣ ನಡೆದ ಶಾಲೆಗೂ ಸಂಸದರಿಗೂ ಇರುವ ಸಂಬಂಧವೇನು ಎಂಬ ವಿಷಯದ ಕುರಿತು ಮಾಹಿತಿ ಸಂಗ್ರಹಿಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.
ಇಡೀ ಪಿಎಸ್‍ಐ ನೇಮಕಾತಿ ಹಗರಣದ ಕೇಂದ್ರ ಬಿಂದುವೇ ಕಲಬುರಗಿಯ ಜ್ಞಾನಜ್ಯೋತಿ ಕೇಂದ್ರ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಪತಿಗೆ ಸೇರಿದ ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದಿವೆ.
ಈಗಾಗಲೇ ಪ್ರಕರಣ ಸಂಬಂಧ ದಿವ್ಯಾ ಅವರ ಪತಿ ಸೇರಿದಂತೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಮೇಲ್ವಿಚಾರಕರು ಮತ್ತು ಕೆಲ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.