ಬೆಂಗಳೂರು, ಆ. 17:
ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಸರ್ಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿದಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ನೀಡಿದ ‘ನಮ್ಮಭಿಮಾನದ ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು, ಈ ಕುರಿತು ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ನೇತೃತ್ವದಲ್ಲಿ ರಚಿಸಿರುವ ಸಮಿತಿ ವರದಿ ನೀಡಿದ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಸಮಿತಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿರುವ ವಿವಿಧ ರಾಜ್ಯಗಳಿಗೆ ಸಮಿತಿ ಭೇಟಿ ನೀಡಿ, ಅಧ್ಯಯನ ನಡೆಸಲಿದೆ. ಶೀಘ್ರದಲ್ಲೇ ವರದಿ ನೀಡಲು ಸೂಚಿಸಲಾಗಿದೆ ಎಂದರು
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಬಡ್ತಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನೌಕರರು ಹಾಗೂ ಅವರ ಅವಲಂಬಿತ ಕುಟುಂಬಗಳ ಸದಸ್ಯರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ‘ಕರ್ನಾಟಕ ಆರೋಗ್ಯ ಸಂಜೀವಿನ ಯೋಜನೆ’ ಜಾರಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರು ಮತ್ತು ಏಳನೇ ಆಯೋಗದ ಎರಡೂ ಶಿಫಾರಸುಗಳನ್ನು ನಾನು ಮುಖ್ಯಮಂತ್ರಿ ಇದ್ದಾಗಲೇ ಜಾರಿ ಮಾಡಿರುವೆ. 2018ರಲ್ಲಿ 10,500 ಕೋಟಿ ಹಾಗೂ 2024ರಲ್ಲಿ 20 ಸಾವಿರ ಕೋಟಿ ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಿದೆ. ಜನರ ತೆರಿಗೆ ಹಣವನ್ನು ಖರ್ಚು ಮಾಡುವಾಗ ಸರ್ಕಾರ ಸದಾ ಮಿತವ್ಯಯದ ಬಗ್ಗೆ ಚಿಂತಿಸುತ್ತದೆ. ಆದರೂ, ಸರ್ಕಾರಿ ನೌಕರರಿಗೆ ಸವಲತ್ತು ನೀಡುವಾಗ ಆಯೋಗದ ಶಿಫಾರಸಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು
Previous Articleಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು.
Next Article ಕಳ್ಳನಾದ ಪೋಲಿಸ್ ಇನ್ಸ್ ಪೆಕ್ಟರ್