ಬೆಂಗಳೂರು, ಜು.25:
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಆರೋಪದ ಬಗ್ಗೆ ವಿಸ್ತೃತ ಚರ್ಚೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಪುರಾಣ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿ ಸಂಬಂಧ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಶ್ರೀ ಕ್ಷೇತ್ರವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಸಿದ್ದ ಪಡಿಸಿರುವ ಕಾನೂನನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ .ಪಾಟೀಲ್ ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಶ್ರೀ ರೇಣುಕಾಯಲ್ಲಮ್ಮ ದೇವಾಲಯದ ಅಭಿವೃದ್ಧಿ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಸ್ವತಂತ್ರ ಶಾಸನಬದ್ಧ ಪ್ರಾಧಿಕಾರದ ರಚನೆಗೆ ಅವಕಾಶ ಕಲ್ಪಿಸಲು ‘ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024’ ವನ್ನು ಸಿದ್ಧಪಡಿಸಲಾಗಿದೆ ಇದನ್ನು ಅನುಮೋದಿಸಬೇಕು ಎಂದು ಕೋರಿದರು
ಧಾರ್ಮಿಕ ಇಲಾಖೆ ಸಚಿವರು, ಜಿಲ್ಲಾಉಸ್ತುವಾರಿ ಸಚಿವರು ಪ್ರಾಧಿಕಾರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರುತ್ತಾರೆ. ಸಂಸದರು, ಶಾಸಕರು, ಸರಕಾರೇತರ ವ್ಯಕ್ತಿಗಳು, ಸರಕಾರಿ ಅಧಿಕಾರಿಗಳು ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು
ಬೆಳಗಾವಿ ಜಿಲ್ಲೆಯ ಪುರಾಣ ಪ್ರಸಿದ್ಧವಾದ ಈ ದೇವಾಲಯ ಪ್ರದೇಶ ಒಟ್ಟು 88. 37 ಎಕರೆ ವಿಸ್ತೀರ್ಣ ಹೊಂದಿದೆ. ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧಿನಿಯಮ ಮತ್ತು ಉದ್ದೇಶಿತ ಪ್ರಾಧಿಕಾರದೊಂದಿಗೆ ಸಮಗ್ರ ಯೋಜನೆಯೊಂದಿಗೆ ಅಭಿವೃದ್ಧಿಪಡಿಸಿ ಭಕ್ತಾಧಿಗಳಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವನ್ನಾಗಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು
ಇದೆ ವೇಳೆ,ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕ-2024 ಮಂಡಿಸಲಾಯಿತು.
ಈ ತಿದ್ದುಪಡಿ ಮಸೂದೆ ಅನುಮೋದನೆಗೊಂಡರೆ ಸ್ಮಾರಕಗಳು, ಪುರಾತತ್ವ ಸ್ಥಳಗಳನ್ನು ದತ್ತು ಪಡೆದು ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಸಿಗಲಿದೆ.
ಖಾಸಗಿ ಕಂಪನಿಗಳು, ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಸಂಸ್ಥೆಗಳು, ಪಾಲುದಾರಿಕೆ ಕಂಪನಿಗಳು, ಸೊಸೈಟಿಗಳು, ಸಹಕಾರ ಸಂಘಗಳು, ಟ್ರಸ್ಟ್‌ಗಳು, ಸರಕಾರೇತರ ಸಂಸ್ಥೆಗಳು, ವ್ಯಕ್ತಿಗಳನ್ನು ‘ಸ್ಮಾರಕ ಮಿತ್ರರು’ ಪಟ್ಟಿಗೆ ಸೇರಿಸಲು ತಿದ್ದುಪಡಿ ವಿಧೇಯಕದಲ್ಲಿಅನುವು ಮಾಡಿಕೊಡಲಾಗಿದೆ.
Previous Articleಗ್ರೇಟರ್ ಬೆಂಗಳೂರಿಗೆ ಸದನ ಸಮಿತಿ.
Next Article ಮುಡಾ ಅಕ್ರಮಕ್ಕೆ ಬಲಿಯಾದ ವಿಧಾನ ಮಂಡಲ ಕಲಾಪ.