ರಾಮನಗರ : ಆ ಕೆರೆ ತಾಲೂಕಿನ ಬೃಹತ್ ಕೆರೆಯಲ್ಲಿ ಒಂದು. ಅಂತಹ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಲಕ್ಷಾಂತರ ರೂಪಾಯಿ ಟೆಂಡರ್ ಕರೆಯಲಾಗಿತ್ತು. ಆದ್ರೆ ಮೀನು ಹಿಡಿಯುವ ಸಮಯಕ್ಕೆ ಕೆರೆಯಲ್ಲಿ ಮೀನುಗಳು ಅನುಮಾನಸ್ಪದವಾಗಿ ಸಾಯುತ್ತಿವೆ. ಇತ್ತ ಟೆಂಡರ್ ಪಡೆದ ಗುತ್ತಿಗೆದಾರನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕುರಿತು ಒಂದು ವರದಿ…
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿವೆ. ಪ್ರತಿದಿನ ಮೀನುಗಳು ಸಾವನ್ನಪ್ಪಿ ಗಾಳಿ ಬೀಸಿದ ಹಾಗೆ ದಡಕ್ಕೆ ಬರುತ್ತಿವೆ. ತಿಟ್ಟಮಾರನಹಳ್ಳಿ ಗ್ರಾಮದ ಸಂಪತ್ ಕುಮಾರ್ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಸಾಕಾಣೆಗಾಗಿ ಕೆರೆಯನ್ನ 26,30,000 ಲಕ್ಷ ರೂಪಾಯಿಗೆ ಟೆಂಡರ್ ಪಡೆದಿದ್ರು. ಆದ್ರೆ ಇದೀಗ ಮೀನುಗಳು ಅನುಮಾನಸ್ಪದವಾಗಿ ಸಾಯುತ್ತಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
1 ಲಕ್ಷ ಮೀನಿನ ಮರಿಗಳನ್ನ ಕೆರೆಗೆ ಬಿಡಲಾಗಿತ್ತು ಮೀನುಗಳು ಸಹ 1-2 ಕೆಜಿ ತೂಕದಷ್ಟು ಬೆಳವಣಿಗೆ ಆಗಿದ್ದವು. ಇನ್ನೇನು ಕೆರೆಗೆ ಬಲೆ ಹಾಕಿ ಮೀನುಗಳನ್ನ ಹಿಡಿದು ಮಾರಾಟ ಮಾಡುವಂತಹ ಸಮಯದಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ ಇದ್ರಿಂದ ಗುತ್ತಿಗೆದಾರ ಸಾಲದ ಸುಳಿಗೆ ಸಿಲುಕಿದ್ದಾನೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ರೆ ಅಸಡ್ಡೆ ಹಾಗೂ ಬೇಜವಾಬ್ದಾರಿ ತನ ತೋರುತ್ತಾರೆ.
ಈ ರಾಮಮ್ಮನ ಕೆರೆಗೆ ಚನ್ನಪಟ್ಟಣದ ಸುಮಾರು 40% ತ್ಯಾಜ್ಯ ನೀರು ಈ ಕೆರೆಯನ್ನ ಸೇರುತ್ತಿದೆ. ಇದಕ್ಕೆ ಪ್ರಮುಖವಾಗಿ ಚನ್ನಪಟ್ಟಣ ನಗರದ ಬಡಾಮಕಾನ್, ಎಲೇಕೇರಿ, ಕೋಟೆ ಸೇರಿ ಹಲವು ಬಡಾವಣೆಯ ಕೊಳಚೆ ನೀರು ಇದ್ರ ಜತೆಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತ್ಯಾಜ್ಯ ಕೂಡ ಕೆರೆ ಸೇರಿತ್ತಿದ್ದು ಇದ್ರಿಂದ ವಿಷಪೂರಿತ ವಸ್ತು ಕೆರೆಯನ್ನು ಸೇರಿ ನೀರು ಮಲಿನಗೊಂಡು ಮೀನುಗಳು ಸಾಯುತ್ತಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಅಲ್ಲದೇ ಇತ್ತೀಚೆಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು ಇದ್ರಲ್ಲಿ ನಿಷೇಧಿತ ಕ್ಯಾಟ್ ಫಿಶ್ ಕೆರೆಗಳನ್ನ ಸೇರುತ್ತಿವೆ ಇವುಗಳು ಸಹ ಉಳಿದ ಮೀನುಗಳನ್ನ ಸಾಯಿಸುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಾರೆ ಲಕ್ಷಾಂತರ ರೂಪಾಯಿ ಟೆಂಡರ್ ಪಡೆದು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಸಂಪತ್ ಕುಮಾರ್ ಇದೀಗ ಮೀನು ಹಾಗೂ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ.