ಬೆಂಗಳೂರು,ಫೆ.8-
ನಗರದಲ್ಲಿ ನೆತ್ತರು ಹರಿದಿದ್ದು, ಕೊಟ್ಟ ಸಾಲ ವಾಪಸ್ ಕೇಳಿದ ಲೇವಾದೇವಿ(ಫೈನಾನ್ಸ್) ದಾರನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನಿನ್ನೆ ಮಧ್ಯರಾತ್ರಿ ಚಿಕ್ಕ ಬಾಣಸವಾಡಿ (Chikka Banaswadi) ಯಲ್ಲಿ ಬಳಿ ನಡೆದಿದೆ. ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ (29) ಕೊಲೆಯಾದವರು. ವ್ಯವಹಾರದ ವೇಳೆ ಶೇಖರ್ ಇತ್ತೀಚೆಗೆ ಮನೋಜ್ ನಿಗೆ ಹಣ ನೀಡಿದ್ದು, ತಡರಾತ್ರಿ ಕುಡಿದ ಅಮಲಿನಲ್ಲಿ ಮನೋಜ್ ಬಳಿ ಕೊಟ್ಟ ಹಣ ವಾಪಾಸ್ ಕೊಡುವಂತೆ ಶೇಖರ್ ಕೇಳಿದ್ದಾನೆ.
ಸ್ನೇಹಿತರ ಜತೆ ಬಂದಿದ್ದ ಮನೋಜ್ ‘ಸಾಲ ವಾಪಸ್ ಕೊಡಲ್ಲ, ಏನ್ ಮಾಡ್ಕೊತಿಯೋ ಮಾಡ್ಕೋ’ ಎಂದು ಗಲಾಟೆ ಆರಂಭಿಸಿದ್ದ. ಈ ವೇಳೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಮನೋಜ್ ಹಾಗೂ ಆತನ ಸ್ನೇಹಿತರು ಶೇಖರ್ನ ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆಗಳಲ್ಲಿ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿ ಕೃತ್ಯ ನಡೆಸಿದ ಆರೋಪಿ ಮನೋಜ್ ಹಾಗೂ ಆತನ ಸ್ನೇಹಿತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.