ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಯಾವುದೇ ಧಾವಂತವಿಲ್ಲದೆ 7 ವಿಕೆಟ್‌ಗಳಿಂದ ಗೆದ್ದುಕೊಂಡ ಗುಜರಾತ್ ಟೈಟಾನ್ಸ್ 13 ಪಂದ್ಯಗಳಿಂದ 20 ಅಂಕಗಳನ್ನು ಸಂಪಾದಿಸಿಕೊಂಡು ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಲ್ಲದೆ, ಇನ್ನೂ ಆರು ಪಂದ್ಯಗಳು ಇರುವಂತೆಯೇ ಪ್ಲೇಆಫ್ ಅನ್ನೂ ಖಾತ್ರಿಪಡಿಸಿಕೊಂಡಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ರವಿವಾರ ಮಧ್ಯಾಹ್ನ ನಡೆದ ಟಾಟಾ ಐಪಿಎಲ್‌ನ 62ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ನಾಲ್ಕು ಬದಲಾವಣೆಗಳೊಂದಿಗೆ ಅದೃಷ್ಟ ಪರೀಕ್ಷೆಗಿಳಿದ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 133 ರನ್‌ಗಳ ಸಾಧಾರಣ ಮೊತ್ತವನ್ನು ಗಳಿಸುವಲ್ಲಿ ಸುಸ್ತು ಹೊಡೆಯಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಅಮೋಘ ಅರ್ಧಶತಕ (53 ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್), ಮೊಯಿನ್ ಆಲಿ (21), ನಾರಾಯಣ್ ಜಗದೀಶನ್ (ಆಜೇಯ 39) ಮಾತ್ರ ಗಮನಾರ್ಹ ಆಟವಾಡಿದರು. ಮೊಹಮ್ಮದ್ ಶಮಿ 19 ರನ್‌ಗಳಿಗೆ 2 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟುವಲ್ಲಿ ಗುಜರಾತ್ ಪರವಾಗಿ ಮುಂಚೂಣಿಯಲ್ಲಿ ನಿಂತವರು ಆರಂಭಿಕ ವೃದ್ಧಿಮಾನ್ ಸಾಹಾ. ಕೀಪಿಂಗ್ ವೇಳೆ ಎರಡು ಕ್ಯಾಚ್ ತೆಗೆದುಕೊಂಡಿದ್ದ ಅವರು, ಆಜೇಯ 67 ರನ್ (57 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿದರು. ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಶುಭಮನ್ ಗಿಲ್ (17), ಮ್ಯಾಥ್ಯೂ ವೇಡ್ (20), ಡೇವಿಡ್ ಮಿಲ್ಲರ್ (ಆಜೇಯ 15) ಅಲ್ಪ ಕಾಣಿಕೆ ನೀಡಿದರು. ಇನ್ನೂ 5 ಎಸೆತಗಳು ಇರುವಂತೆಯೇ ತಂಡ 3 ವಿಕೆಟ್‌ಗೆ 137 ರನ್ ಗಳಿಸಿ, ಪಂದ್ಯವನ್ನು ಗೆದ್ದು ಬೀಗಿತು. ಚೆನ್ನೈ ಪರ ಮತೀಶ್ ಪತೀರಣ ಎರಡು, ಮೊಯಿನ್ ಆಲಿ 1 ವಿಕೆಟ್ ಪಡೆದರು,