ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೂ ಸಂಕಷ್ಟ ದೂರವಾಗಿಲ್ಲ.
ನಿಯಮ ಬಾಹಿರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ 14 ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ ಎಂಬ ಆರೋಪದ ಕುರಿತಂತೆ ವಿಸ್ತೃತವಾದ ತನಿಖೆಯ ಅಗತ್ಯವಿದೆ ಎಂದು ಜಾರಿ ನಿರ್ದೇಶನಾಲಯ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಿ ನೀಡಿರುವ ಲೋಕಾಯುಕ್ತ ವರದಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದೆ.
ಪಾರ್ವತಿ ಅವರಿಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ನಮಗೆ ಲಭ್ಯವಿದೆ. ಇದರಲ್ಲಿ ವಿಸ್ತೃತ ತನಿಖೆ ಆಗಬೇಕು. ಹೀಗಾಗಿ ಲೋಕಾಯುಕ್ತ ವರದಿಯನ್ನು ತಿರಸ್ಕರಿಸಬೇಕು’ ಎಂದು ಇ.ಡಿ ಕೋರಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಲೋಕಾಯುಕ್ತ ಹಲವಾರು ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿಲ್ಲ ದೂರುದಾರರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಲ್ಲ ಹೀಗಾಗಿ ಲೋಕಾಯುಕ್ತ ತನಿಖೆ ಅಪೂರ್ಣ ಎಂಬಂತೆ ಇದೆ ಈ ಹಿನ್ನೆಲೆಯಲ್ಲಿ ತನಿಖೆ ವರದಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ.
ನಿಯಮಬಾಹಿರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ ಎಂಬ ಆರೋಪ ಕುರಿತಂತೆ ತನಿಖೆ ನಡೆಸಿದ ಲೋಕಾಯುಕ್ತ ಈ ಆರೋಪಕ್ಕೆ ಯಾವುದೇ ಪೂರಕ ಸಾಕ್ಷಿಗಳು ಲಭ್ಯವಿಲ್ಲ ಎಂದು ಹೇಳಿ ಬಿ ರಿಪೋರ್ಟ್ ಸಲ್ಲಿಸಿದೆ.
Previous Articleಬೆಂಗಳೂರಲ್ಲಿ ಗ್ಯಾಂಗ್ ರೇಪ್
Next Article ಇಸ್ಪೀಟ್ ಆಡುತ್ತಿದ್ದವರನ್ನು ವಿವಸ್ತ್ರಗೊಳಿಸಿ ದರೋಡೆ