ಬೆಂಗಳೂರು,ನ.26-
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅವ್ಯವಹಾರ ಆರೋಪದ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ಬರುವ ಡಿಸೆಂಬರ್ 10 ರಂದು ಕೈಗೆತ್ತಿಕೊಳ್ಳಲಿದೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ ಬಂದಿದೆ ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ
ಇದೇ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಈಗಾಗಲೇ ಹಲವು ಏಜೆನ್ಸಿಗಳಿಂದ ತನಿಖೆ ನಡೆಯುತ್ತಿದೆ.
ಒಂದೆಡೆ ಇಡಿ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಲೋಕಾಯುಕ್ತ ಪೊಲೀಸರಿಂದಲೂ ತನಿಖೆಯನ್ನು ನಡೆಸಲಾಗುತ್ತಿದೆ,ಈ ನಡುವೆ ಪ್ರಕರಣ ಸಿಬಿಐಗೆ ಕೋರಿದ್ದ ಅರ್ಜಿ ಇಂದು ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ
ಕೋರ್ಟ್ ಗೆ ಲೋಕಾಯುಕ್ತ ಎಸ್ಪಿ ಉದೇಶ್ ಕೂಡ ಆಗಮಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ತನಿಖಾ ವರದಿಯನ್ನು ಲೋಕಾಯುಕ್ತ ವಕೀಲ ವೆಂಕಟೇಶ ಅರಬಟ್ಟಿ ಕೋರ್ಟ್ ಗೆ ಸಲ್ಲಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಒಂದೇ ದಿನದಲ್ಲಿ ವಾದ-ಪ್ರತಿವಾದ ಮುಗಿಸುವಂತೆ ಪೀಠ ಸೂಚನೆ ನೀಡಿ ಅರ್ಜಿಯನ್ನು ಡಿಸೆಂಬರ್ 10ಕ್ಕೆ ಮುಂದೂಡಿದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ.
ಕಳೆದ ವಿಚಾರಣೆ ಸಮಯದಲ್ಲಿ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಸೂಚಿಸಿತ್ತು. ಅಲ್ಲದೇ, ತನಿಖಾ ಪ್ರಗತಿ ವರದಿಯನ್ನು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.