ಮೈಸೂರು,ಸೆ.27:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು
ಸಿಆರ್‌ಪಿ ಸೆಕ್ಷನ್ 156(3)ರಡಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಎ 1 ಆರೋಪಿ), ಅವರ ಪತ್ನಿ ಪಾರ್ವತಿ (ಎ 2 ಆರೋಪಿ), ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ (ಎ 3 ಆರೋಪಿ), ಜಮೀನು ಮಾಲೀಕ ದೇವರಾಜ್ (ಎ 4 ಆರೋಪಿ) ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸ್ನೇಹ ಮಯಿ ಕೃಷ್ಣ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿತ್ತು.
ಸಿದ್ದರಾಮಯ್ಯ ವಿರುದ್ಧ ಯಾವ ನ್ಯಾಯಿಕ ಪ್ರಕ್ರಿಯೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂಬ ವಿಷಯದ ಕುರಿತಂತೆ ಲೋಕಾಯುಕ್ತ ಪೊಲೀಸರಲ್ಲಿ ಜಿಜ್ಞಾಸೆ ಉಂಟಾಗಿತ್ತು. ಸಿದ್ದರಾಮಯ್ಯ ವಿರುದ್ಧ ಸಿಆರ್ ಪಿಸಿ ಅಥವಾ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆ ಎಂಬ ವಿಷಯದ ಕುರಿತಾಗಿ ಸ್ಪಷ್ಟನೆ ನೀಡುವಂತೆ ಕೋರಿ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ರವರು ರಾಜ್ಯ ಲೋಕಾಯುಕ್ತರಿಗೆ ಮನವಿ ಮಾಡಿದ್ದರು.
ಈ ಮನವಿಯ ಕುರಿತಂತೆ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿದ ಲೋಕಾಯುಕ್ತ ಎಡಿಜಿಪಿ ಜಿಪಿ ಮನೀಷ್ ಕರ್ಬೀಕರ್ ಜನಪ್ರತಿನಿಧಿಗಳ ನ್ಯಾಯಾಲಯ ಸಿಆರ್ ಪಿಸಿ ಅನ್ವಯ ಪ್ರಕರಣ ದಾಖಲಿಸುವಂತೆ ಸೂಚಿಸಿದೆ ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಪ್ರಕರಣ ದಾಖಲಿಸಬಹುದು ಎಂದು ಸ್ಪಷ್ಟನೆ ನೀಡಿದ್ದರು.
ಈ ಸ್ಪಷ್ಟನೆ ದೊರೆತ ನಂತರ ಮೈಸೂರು ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಸಿಆರ್‌ಪಿ ಸೆಕ್ಷನ್ 156(3)ರಡಿ ಎಫ್ ಐ ಆರ್ ದಾಖಲಿಸಿದರು.
ಇದಷ್ಟೇ ಅಲ್ಲದೆ ಆರೋಪಿಗಳ ವಿರುದ್ಧ ಸೆಕ್ಷನ್ 120ಬಿ(ಅಪರಾಧಿಕ ಒಳಸಂಚು), 166-ಯಾವುದೇ ವೈಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ನೌಕರನು ಕಾನೂನು ಬದ್ದ ಆದೇಶ ಪಾಲಿಸದಿರುವುದು, 403 ಸ್ವತ್ತಿನ ಅಪ್ರಮಾಣಿಕ ದುರುಪಯೋಗ, 406 ಅಪರಾಧಿಕ ನಂಬಿಕೆ ದ್ರೋಹ, 420 ವಂಚನೆ ಮಾಡುವುದು ಮತ್ತು ಸ್ವತ್ತನ್ನ ನೀಡಲು ಅಪ್ರಮಾಣಿಕವಾಗಿ ಪ್ರೇರೇಪಿಸುವುದು, 42 ಕೇಡಿನ ಅಪರಾಧಕ್ಕಾಗಿ ದಂಡನೆ, 465 ಖೋಟಾ ತಯಾರಿಕೆಗೆ ದಂಡನೆ, 468 ವಂಚನೆ ಉದ್ದೇಶಕ್ಕಾಗಿ ಖೋಟಾ ತಯಾರಿಕೆ, 340 ಅಕ್ರಮ ಬಂಧನ ಮತ್ತು ಕಲಂ 351ರ ಅಡಿಯಲ್ಲಿ ತನಿಖೆ ನಡೆಯಲಿದೆ.
Previous Articleಪೊಲೀಸ್ ಅಧಿಕಾರಿ ಪತ್ರ ಸೃಷ್ಟಿಸಿದ ಸಂಚಲನ.
Next Article ಸಿಎಂ ವಿರುದ್ಧ ಸಿಬಿಐ ತನಿಖೆಗೆ ಅರ್ಜಿ.