ಬೆಂಗಳೂರು,ಏ.11-
ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿಸೈಬರ್ ಕಮಾಂಡ್ ಕೇಂದ್ರ ಕಾರ್ಯಾರಂಭ ಮಾಡಲಿದೆ.ಇದು ದೇಶದಲ್ಲೇ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಕೇಂದ್ರವಾಗಿದೆ.ಇದರ ಮೂಲಕ ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಬಹುದು ಎನ್ನಲಾಗಿದೆ.
ನೂತನ ಸೈಬರ್ ಕಮಾಂಡ್ ಸೆಂಟರ್ ಗೆ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಶ್ರೇಣಿಯ ಐಪಿಎಸ್ ಅಧಿಕಾರಿ ಮುಖ್ಯಸ್ಥರಾಗಲಿದ್ದು,ವಿಭಾಗ ಮಟ್ಟದಲ್ಲಿ ಎಸ್ ಪಿಗಳು ಸೈಬರ್ ಅಪರಾಧಗಳ ತಡೆ ಹಾಗೂ ಪತ್ತೆಯ ನೇತೃತ್ವವಹಿಸಲಿದ್ದಾರೆ.
ನೂತನ ಸೈಬರ್ ಕಮಾಂಡ್ ಕೇಂದ್ರದ ಡಿಜಿಪಿಯಾಗಿ 1994 ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಡಿಜಿಪಿ ಪ್ರಣವ್ ಮೊಹಾಂತಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್‌ಲೈನ್ ಅಪರಾಧಗಳು, ಸೆಕ್ಸ್‌ಟಾರ್ಷನ್, ಡಿಜಿಟಲ್ ಬಂಧನ, ಡೀಪ್‌ಫೇಕ್‌ಗಳು, ಗುರುತಿನ ಕಳ್ಳತನ, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ಔಟ್ರೀಚ್, ತಪ್ಪು ಮಾಹಿತಿ, ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‌ವೇರ್, ಸ್ಟಾಕಿಂಗ್ ಸೇರಿದಂತೆ ಸೈಬರ್ ವಂಚನೆಗಳನ್ನು ಕೇಂದ್ರ ಪರಿಶೀಲಿಸಲಿದೆ.
ಈ ಹಿಂದೆ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ವಿಭಾಗವು ಅಪರಾಧ ತನಿಖಾ ವಿಭಾಗದ (ಸಿಐಡಿ) ಭಾಗವಾಗಿತ್ತು. ಇದೀಗ ಪ್ರತ್ಯೇಕ ವಿಭಾಗವಾಗಿ ಕಾರ್ಯಾಚರಿಸಲಿದ್ದು, ಲಭ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಬಳಸಿಕೊಂಡು ಸೈಬರ್ ಕಮಾಂಡ್ ಕಾರ್ಯನಿರ್ವಹಿಸಲಿದೆ.
ಈಗಾಗಲೇ ರಾಜ್ಯಾದ್ಯಂತ ಅಸ್ತಿತ್ವದಲ್ಲಿರುವ 43 ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿರಲಿದೆ. ಇವುಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳಾಗಿ ಮರುನಾಮಕರಣ ಮಾಡಲಾಗುತ್ತದೆ.
ಇದರ ಜೊತೆಗೆ, ಡಿಜಿಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳು, ರಾಜ್ಯ ಮಟ್ಟದ ಅಧಿಕಾರ ವ್ಯಾಪ್ತಿಯೊಂದಿಗೆ ಸಿಐಡಿ, ಹಾಗೆಯೇ ನಗರ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕಮಾಂಡ್ ಘಟಕವನ್ನು ಸಹ ಈ ಸೈಬರ್ ಕಮಾಂಡ್ ಸೆಂಟರ್‌ನ ವ್ಯಾಪ್ತಿಗೆ ತರಲಾಗುತ್ತದೆ.
ಹೀಗೆ ಒಟ್ಟು 45 ಪೊಲೀಸ್ ಠಾಣೆಗಳನ್ನು ಈ ವಿಶೇಷ ಘಟಕದ ವ್ಯಾಪ್ತಿಗೆ ತರಲಾಗುತ್ತದೆ
Previous Articleಈ ಕಾರಣಕ್ಕಾಗಿ ಹೊಸ ಪೊಲೀಸ್ ಠಾಣೆ
Next Article ಕಮೀಷನ್ ಆರೋಪ ತನಿಖೆಗೆ ಎಸ್.ಐ.ಟಿ.ರಚನೆ