ಬೆಂಗಳೂರು,ಡಿ.18:
ಮೋದಿ ಮೋದಿ ಎಂದು ಸ್ಮರಣೆ ಮಾಡುವ ನೀವು ಅದರ ಬದಲಿಗೆ ದೇವರ ಸ್ಮರಣೆ ಮಾಡಿದ್ದಿದ್ದರೆ, ಏಳು ಜನ್ಮದಲ್ಲಿ ಮಾತ್ರವಲ್ಲ ನೂರು ಜನ್ಮದಲ್ಲೂ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.
ಸಂವಿಧಾನ ಕುರಿತ ಚರ್ಚೆಯ ಮೇಲೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷ ಮತ್ತು ಅದರ ಹಿಂದಿರುವ ಪರಿವಾರಕ್ಕೆ ಇತ್ತೀಚೆಗೆ ಮೋದಿ…ಮೋದಿ.. ಮೋದಿ ಎಂದು ಹೇಳುವುದು ಒಂದು ವ್ಯಸನ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಮಿತ ಶಾ ಅವರೇ, ಇತಿಹಾಸವನ್ನು ಓದಿರುವ ನಮ್ಮಂತಹವರಿಗೆ ನಿಮ್ಮೊಳಗಿನ ಅಂಬೇಡ್ಕರ್ ದ್ವೇಷ ಹೊಸದಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಬರೆದಿರುವ ದೇಶದ ಸಂವಿಧಾನವನ್ನು ಅವರು ಬದುಕಿರುವಾಗಲೇ ನಿಮ್ಮ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಯಾಕೆ ತಿರಸ್ಕರಿಸಿತ್ತು? ಆರ್ ಎಸ್ ಎಸ್ ನಾಯಕರಾಗಿದ್ದ ಹೆಡಗೆವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಇವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು, ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ. ಆ ಅಭಿಪ್ರಾಯವನ್ನೇ ನೀವು ಸಂಸತ್ ನಲ್ಲಿ ಆಡಿದ್ದೀರಿ” ಎಂದು ಟೀಕಿಸಿದ್ದಾರೆ.
ನಾನು ಮಾತ್ರ ಅಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ ನೀವು ಕೂಡಾ ಗೃಹಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ನಿಮಗೆ ಸಿಗುತ್ತಿರಲಿಲ್ಲ. ನೀವು ನಿಮ್ಮೂರಿನಲ್ಲಿ ಎಲ್ಲಾದರೂ ಗುಜರಿ Business ಮಾಡಿಕೊಂಡು ಇರಬೇಕಾಗುತ್ತಿತ್ತು, ದೇಶದ ಪ್ರಧಾನಿ ಮತ್ತು ನಿಮ್ಮ ಸಹದ್ಯೋಗಿ ನರೇಂದ್ರ ಮೋದಿ ಅವರು ಕೂಡಾ ರೈಲ್ವೇ ಸ್ಟೇಷನ್ ನಲ್ಲಿ ಚಹಾ ಮಾರಿಕೊಂಡೇ ಇರಬೇಕಾಗಿತ್ತೋ ಏನೋ? ಅವರಿಗೂ ಪ್ರಧಾನಿಯಾಗುವ ಅವಕಾಶವೇ ಸಿಗುತ್ತಿರಲಿಲ್ಲ. ಇದನ್ನು ಪ್ರಧಾನಿಯವರೂ ಒಪ್ಪಿಕೊಳ‍್ಳಬಹುದು ಎಂದು ನಂಬಿದ್ದೇನೆ, ನೀವೂ ಒಪ್ಪಿಕೊಂಡು ಬಿಡಿ” ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಎಂಬ ಮನುಷ್ಯ ಈ ಭೂಮಿಯಲ್ಲಿ ಹುಟ್ಟದೆ ಇರುತ್ತಿದ್ದರೆ, ನನಗೆ ಮುಖ್ಯಮಂತ್ರಿಯಾಗುವ ಅವಕಾಶವೇ ಬರುತ್ತಿರಲಿಲ್ಲ, ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು.. ನಮ್ಮ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರಲಿಲ್ಲ, ಕಲಬುರ್ಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು. ಈ ವಾಸ್ತವ ಸದಾ ನಮ್ಮ ನೆನಪಲ್ಲಿರುತ್ತದೆ. ನೀವು ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ, ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ, ಗೌರವ ಮತ್ತು ಜನರ ಸೇವೆ ಮಾಡುವ ಅವಕಾಶವನ್ನು ಕೊಟ್ಟಿದೆ ಎನ್ನುವುದನ್ನು ನಾವು ಮರೆತಿಲ್ಲ” ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನೀವು ತುಚ್ಛೀಕರಿಸಿದಷ್ಟೂ ಪುಟಿದು ಪುಟಿದು ಮೇಲೆದ್ದು ಬಂದು ಅವರು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ. ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಬೆನ್ನಹಿಂದಿರುವ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವರ್ಗ ಸಿಗಬೇಕಾದರೆ ಏನು ಮಾಡಬೇಕೆಂದು ಅಮಿತ್ ಶಾ ಗೆ ಸಿಎಂ ಸಲಹೆ.
Previous Articleಪೊಲೀಸರು ಲಾಕ್ ಮಾಡುತ್ತಾರೆ ಹುಷಾರ್.
Next Article ಮುಂಬೈ ಕರ್ನಾಟಕಕ್ಕೆ ಸೇರಬೇಕಂತೆ.