ಬೆಂಗಳೂರು,ಜು.14-ನಗರದಲ್ಲಿ ಆಟೋಗಳ ಹಿಂದೆ ಬಣ್ಣದ ಜಾಹೀರಾತು ಹಾಕಿಕೊಂಡು ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಸ್ವಲ್ಪ ಪ್ರಮಾಣದ ಹಣದಾಸೆಗೆ ಜಾಹೀರಾತು ಪೋಸ್ಟರ್ ಅಂಟಿಸಿಕೊಂಡು ಓಡಾಡುತ್ತಿದ್ದ ಆಟೋ ಚಾಲಕರು ಆರ್ ಟಿಓ ಅಧಿಕಾರಿಗಳಿಗೆ ಸಾವಿರಾರು ರೂಗಳ ದಂಡವನ್ನು ಪಾವತಿಸಬೇಕಾಗಿದೆ.
ಆಟೋಗಳ ಮೇಲೆ ಜಾಹೀರಾತು ಪೋಸ್ಟರ್ ಅಂಟಿಸಿ ಸಂಚರಿಸುತ್ತಿದ್ದ ಆಟೋ ಗಳಿಗೆ ತಲಾ 5 ಸಾವಿರ ರೂ. ದಂಡ ಪ್ರಯೋಗ ಮಾಡಲಾಗಿದೆ.
ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5 ಸಾವಿರ ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ, ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಆದರೆ ಈ ನಿಯಮದ ಬಗ್ಗೆ ನಗರದ ಬಹುತೇಕ ಆಟೋ ಚಾಲಕರಿಗೆ ಅರಿವೇ ಇಲ್ಲ.
ಅನುಮತಿ ಪಡೆಯದೇ ಹಾಗೂ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಓ ದಂಡದ ಸುಳಿಯಲ್ಲಿ ಚಾಲಕರು ಸಿಲುಕಿಕೊಂಡಿದ್ದಾರೆ.
ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಸಾರಿಗೆ ಸಚಿವರ ಸೂಚನೆ ಮೇರೆಗೆ ಆಟೋ ಚಾಲಕರ ಎಫ್‌ಸಿ, ಪರ್ಮಿಟ್, ಮೀಟರ್ ಅಳವಡಿಕೆಯನ್ನ ಆರ್‌ಟಿಓ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಕೆಲವೊಂದು ಪೋಸ್ಟರ್ ಆಟೋ ಹಿಂದೆ ಹಾಕಿದ್ದಕ್ಕೆ ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದೆ.
Previous Articleಆಟೋ ಚಾಲಕರೇ ಹುಷಾರ್ !
Next Article ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !