ಬೆಂಗಳೂರು,ಮೇ.27-
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.
ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿರುವ ಆರೋಪದಲ್ಲಿ ತಮ್ಮನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಶಿಸ್ತು ಸಮಿತಿ ಪ್ರತ್ಯೇಕ ಆದೇಶದಲ್ಲಿ ಇಬ್ಬರಿಗೂ ಮಾಹಿತಿ ರವಾನಿಸಿದೆ.
ಬೆಂಗಳೂರಿನ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಎಸ್‌ಟಿ ಸೋಮಶೇಖರ್ ಆಯ್ಕೆಯಾಗಿದ್ದಾರೆ ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಅರಬೈಲು ಶಿವರಾಮ ಹೆಬ್ಬಾರ್ ಆಯ್ಕೆಯಾಗಿದ್ದಾರೆ.
ಈ ಇಬ್ಬರು ಮೂಲತಃ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಈ ಹಿಂದೆ ಕಾಂಗ್ರೆಸ್ ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಆನಂತರ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ನಂತರದಲ್ಲಿ ಈ ಇಬ್ಬರನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾದರೆ, ಸೋಮಶೇಖರ್ ಅವರು ಸಹಕಾರ ಸಚಿವರಾಗಿದ್ದರು.
ಈ ಇಬ್ಬರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿರುವ ಕಾರಣ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರ ಸಂಖ್ಯೆ 62ಕ್ಕೆ ಕುಸಿದಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಗೆದ್ದಿತ್ತು. ಕೆಲ ತಿಂಗಳ ಹಿಂದೆ ನಡೆದ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರಿಂದ 65ಕ್ಕೆ ಇಳಿದಿತ್ತು. ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕಳೆದ ಮಾರ್ಚ್ 26ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಿದ್ದರಿಂದ ಬಿಜೆಪಿ ಶಾಸಕರ ಸಂಖ್ಯೆ 64 ಕ್ಕೆ ಇಳಿದಿತ್ತು.
ಸತತ ಮುಜುಗರ:
ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಶಿವರಾಮ್ ಹೆಬ್ಬಾರ್ ಮತ್ತು ಎಸ್ ಟಿ ಸೋಮಶೇಖರ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಕೂಡ ಉತ್ತಮ ಬಾಂಧವ್ಯ ಹೊಂದುವಲ್ಲಿ ಯಶಸ್ವಿಯಾಗಿದ್ದರು.
ಅಷ್ಟೇ ಅಲ್ಲದೆ ಪಕ್ಷದ ಹಲವು ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಮೂಲಕ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿದ್ದರೂ ಕೆಲವು ಬಾರಿಯಂತೂ ಪಕ್ಷದ ನಿರ್ಧಾರವನ್ನು ಬಹಿರಂಗವಾಗಿಯೇ ಪ್ರಶ್ನಿಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರು
ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿಯೇ ಈ ಇಬ್ಬರೂ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗಿತ್ತಾದರೂ ಆನಂತರ ಈ ವಿದ್ಯಮಾನಗಳಿಗೆ ಪೂರ್ಣ ವಿರಾಮ ಬಿದ್ದಿತ್ತು ಆದರೆ ಲೋಕಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಇಬ್ಬರು ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು.
ಈ ಕುರಿತಂತೆ ಬಿಜೆಪಿ ರಾಜ್ಯ ಸಮಿತಿ ನೀಡಿರುವ ದೂರನ್ನು ಆದರಿಸಿ ಹೈಕಮಾಂಡ್ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿತ್ತು ಮೊದಲ ನೋಟಿಸ್ ಗೆ ಈ ಇಬ್ಬರು ಸುಧೀರ್ಘ ವಿವರಣೆ ನೀಡಿದ್ದರು.
Previous Article1500 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು.
Next Article BJP ಜನ್ಮ ಜಾಲಾಡಿದ ಪ್ರಿಯಾಂಕ್ ಖರ್ಗೆ .
