ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇವರ ತಲೆದಂಡಕ್ಕೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ತೀವ್ರಗೊಳಿಸಿದ್ದು ಬಿಜೆಪಿ
ಹೈಕಮಾಂಡ್ ಕೂಡಾ ಮಧ್ಯಪ್ರವೇಶ ಮಾಡಿದೆ. ಮಂಗಳವಾರ ರಾತ್ರಿಯೇ ಪ್ರಕರಣ ಸಂಬಂಧ ಎಲ್ಲಾ ಮಾಹಿತಿ ಸಂಗ್ರಹಿಸಿದೆ.
ವರಿಷ್ಟರ ಸೂಚನೆಯ ಹಿನ್ನೆಲೆಯಲ್ಲಿ ಮಂಗಳೂರು ಪ್ರವಾಸದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಬೆಂಗಳೂರಿಗೆ ವಾಪಸ್ಸಾಗಿದ್ದು, ಸಚಿವ ಈಶ್ವರಪ್ಪ ಅವರಿಗೆ ಬೆಂಗಳೂರಿಗೆ ಬರುವಂತೆ ಅವರೇ ಬುಲಾವ್ ನೀಡಿದ್ದಾರೆ.
ಮೃತ ಸಂತೋಷ್ ಪಾಟೀಲ್ ಸೋದರ ಪ್ರಶಾಂತ್ ಪಾಟೀಲ್ ಸಲ್ಲಿಸಿರುವ ದೂರು ಆಧರಿಸಿ
ಈಶ್ವರಪ್ಪ ಹಾಗೂ ಅವರ ಆಪ್ತ ಸಹಾಯಕರ ವಿರುದ್ದ ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಅಡಿ ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಈಶ್ವರಪ್ಪ ಅವರನ್ನು ಮೊದಲ ಆರೋಪಿ ಎಂದೇ ನಮೂದಿಸಲಾಗಿದೆ.
ಈ ಎಲ್ಲಾ ವಿವರ ಹಾಗೂ ಈಶ್ವರಪ್ಪ ನೀಡಿರುವ ವಿವರವನ್ನು ಸಿಎಂ ಬೊಮ್ಮಾಯಿ ಹೈಕಮಾಂಡ್ ಗೆ ರವಾನಿಸಿದ್ದು ಇದೀಗ ಈ ಸಂಬಂಧ ಹೈಕಮಾಂಡ್ ನೀಡುವ ಸಂದೇಶಕ್ಕಾಗಿ ಕಾದು ಕುಳಿತಿದ್ದಾರೆ.