ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳು ಕುತೂಹಲದ ಘಟ್ಟ ತಲುಪಿವೆ. ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆ ಕುರಿತು ಯಾವುದೇ ಗುಟ್ಟು ಬಿಟ್ಟು ಕೊಡದ ಹೈಕಮಾಂಡ್ ನಡೆ ತೀವ್ರ ಅಚ್ಚರಿ ಮೂಡಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ಶುಕ್ರವಾರ ಸಂಜೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿದ್ದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅವರು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಹೈಕಮಾಂಡ್ ಸಂಪುಟ ಸರ್ಜರಿಯ ಬದಲಿಗೆ ನಾಯಕತ್ವ ಬದಲಾವಣೆಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿತ್ತು.
ಆದರೆ, ಯಾವುದೇ ವಿಷಯವಾಗಿ ಬೊಮ್ಮಾಯಿ ಅವರನ್ನು ಮುಖತಃ ಭೇಟಿಯಾಗದ ಅಮಿತ್ ಶಾ ದೂರವಾಣಿಯಲ್ಲೇ ಕೆಲವು ವಿಷಯಗಳನ್ನು ತಿಳಿಸಿ, ತಾವು ರಾಜ್ಯಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡುವಂತೆ ಸೂಚಿದರು.
ಈ ಎಲ್ಲಾ ಕಸರತ್ತಿನ ಬಳಿಕ ಅವರು ಬೆಳಗಿನ ಜಾವ 1 ಗಂಟೆಗೆ ಕರ್ನಾಟಕ ಭವನಕ್ಕೆ ಬಂದು ತಂಗಿದ್ದ ಅವರು ಬೆಳಿಗ್ಗೆ 9ಕ್ಕೆ ಅರುಣ್ ಸಿಂಗ್ ಭೇಟಿ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್ ರಚನೆ ಕುರಿತು ವರಿಷ್ಠರೊಂದಿಗೆ ಚರ್ಚೆ ನಡೆಸಿಲ್ಲ. ರಾಜ್ಯಸಭೆ ಹಾಗು ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆದಿದೆ ಎಂದು ಅವರು ಹೇಳಿದರು.
ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬುದರ ಕುರಿತು ಪಕ್ಷದ ಹಿರಿಯ ಮುಖಂಡ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರನ್ನು ಭೇಟಿ ಮಾಡಲಾಗಿಲ್ಲ ಎಂದು ಅವರು ತಿಳಿಸಿದರು.
ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಆಗಮಿಸಿದ್ದೆ. ತುರ್ತು ಕೆಲಸ ಇದ್ದ ಹಿನ್ನೆಲೆ ಅವರನ್ನು ಭೇಟಿಯಾಗಿಲ್ಲ. ಆದರೆ ಫೋನ್‍ನಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಜೊತೆಗೆ ಚರ್ಚೆ ಮಾಡಿದೆ ಎಂದರು.
ಈ ವೇಳೆ ಚರ್ಚೆಯಲ್ಲಿ ನಾಲ್ಕು ವಿಧಾನಪರಿಷತ್ ಸ್ಥಾನಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕೋರ್ ಕಮಿಟಿ ಪಟ್ಟಿ ನೀಡಲಾಗಿದೆ. ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ. ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ವಿವರಿಸಿದರು.
Previous Articleದೆಹಲಿಯಲ್ಲಿ ಪ್ರತಿಕೂಲ ಹವಾಮಾನ: 11 ವಿಮಾನಗಳ ಮಾರ್ಗ ಬದಲಾವಣೆ
Next Article ಮುತ್ತಿನ ನಗರಿಯಲ್ಲಿ ಮರ್ಯಾದಾ ಹತ್ಯೆ!