ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಹಾಗು ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇದೀಗ ಪಕ್ಷದ ರಾಜ್ಯ ನಾಯಕರಲ್ಲಿ ಭಿನ್ನಾಭಿಪ್ರಾಯಕ್ಕೆ ವೇದಿಕೆಯಾಗಿದೆ.
ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲ ಆಧರಿಸಿ ಕಾಂಗ್ರೆಸ್ ಪರಿಷತ್ ಗೆ ಇಬ್ಬರು ಹಾಗೂ ರಾಜ್ಯಸಭೆಗೆ ಒಬ್ಬರನ್ನು ಆಯ್ಕೆ ಮಾಡಬಹುದಾಗಿದೆ ಇದರ ನಂತರ ಉಳಿಯುವ ಹೆಚ್ಚುವರಿ ಮತ ಹೇಗೆ ಹಂಚಿಕೆ ಮಾಡಬೇಕೆಂಬ ಬಗ್ಗೆ ಗೊಂದಲ ಉಂಟಾಗಿದೆ.
ಪರಿಷತ್ ನ ಎರಡು ಸ್ಥಾನಗಳಿಗೆ ಸಿದ್ದರಾಮಯ್ಯ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಂ.ಆರ್.ಸೀತಾರಾಂ ಮತ್ತು ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರಿಗೆ ನೀಡಬೇಕೆಂದು ಪಟ್ಟು ಹಿಡಿದಿದ್ದರೆ, ಶಿವಕುಮಾರ್ ಈ ಹುದ್ದೆಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್ ಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ರಾಜ್ಯ ಸಭೆಯ ಒಂದು ಸ್ಥಾನಕ್ಕೆ ಸ್ಪರ್ಧಿಸುವಂತೆ ಪ್ರಿಯಾಂಕಾಗಾಂಧಿ ಅವರಿಗೆ ಆಹ್ವಾನ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಹೈಕಮಾಂಡ್ ನಿಲುವಿಗೆ ಬದ್ದರಿರುವುದಾಗಿ ತಿಳಿಸಿದ್ದಾರೆ.ಆದರೆ ಪರಿಷತ್ ವಿಷಯವಾಗಿ ಇಬ್ಬರೂ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಒತ್ತಡಕ್ಕೆ ಸಿಲುಕಿರುವ ಹೈಕಮಾಂಡ್ ಈ ಕುರಿತ ಚರ್ಚೆಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ಹೈಕಮಾಂಡ್ನಿಂದ ತುರ್ತು ಬುಲಾವ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ. ಇಂದು ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ನಾಳೆ ಬೆಳಗ್ಗೆ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯಸಭೆ, ಮೇಲ್ಮನೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಪಕ್ಷದೊಳಗಿನ ಆಂತರಿಕ ಅಸಮಾಧಾನ, ನಾಯಕರ ನಡುವಿನ ಹೊಂದಾಣಿಕೆ ಕೊರತೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪ್ರಿಯಾಂಕ ಗಾಂಧಿ ರಾಜ್ಯದಿಂದ ಸ್ಪರ್ಧಿಸುವಂತೆ ಬೇಡಿಕೆ ಇಟ್ಟಿದ್ದು ಇದರ ಬಗ್ಗೆಯೂ ಚರ್ಚೆ ಸಾಧ್ಯತೆಯಿದೆ.