ವಿಧಾನಪರಿಷತ್ ಸಭಾಪತಿ ಜೆಡಿಎಸ್ ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಆರ್ ಅಶೋಕ್, ಅರಗ ಜ್ಞಾನೆಂದ್ರ , ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಹೊರಟ್ಟಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದರು.
ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ತೋರಿದ ಅಮಿತ್ ಶಾ ಈ ಕುರಿತಂತೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು. ಇದರೊಂದಿಗೆ ಹೊರಟ್ಟಿ ಬಿಜೆಪಿ ಸೇರ್ಪಡೆ ಕುರಿತು ಎದ್ದಿದ್ದ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ.
ಈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ನಾನು ಸದ್ಯದಲ್ಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಘೋಷಿಸಿದರು.
ಬಿಜೆಪಿ ಸೇರ್ಪಡೆ ಕುರಿತಂತೆ ಅಮಿತ್ ಷಾ ಜೊತೆ ಮಾತುಕತೆ ನಡೆಸಲಾಗಿದೆ. ಅವರು ಸಹ ಪಕ್ಷ ಸೇರ್ಪಡೆಗೆ ಒಲವು ತೋರಿದ್ದಾರೆ. ಮೇ 11ಕ್ಕೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ರ್ಪಸುತ್ತೇನೆ. ನಾನು ಪಕ್ಷ ಸೇರುತ್ತಿರುವುದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಿಲ್ಲ.ಎಲ್ಲರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ರಾಜಕೀಯದಲ್ಲಿ ಸಿದ್ದಾಂತಗಳ ಬಗ್ಗೆ ಮಾತನಾಡುವುದೇ ವ್ಯರ್ಥ. ನಾನು ಜೆಡಿಎಸ್ ಬಿಡುತ್ತಿದ್ದೇನೆಂದರೆ ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು. ನನಗೆ ಈಗಲೂ ಆ ಪಕ್ಷದ ಬಗ್ಗೆ ಅಪಾರವಾದ ಗೌರವವಿದೆ. ಪಕ್ಷ ಬಿಟ್ಟ ತಕ್ಷಣ ನಾವು ಹಗುರವಾಗಿ ಮಾತನಾಡಬಾರದು ಎಂದು ಹೊರಟ್ಟಿ ಹೇಳಿದರು.
ಬದಲಾದ ವ್ಯವಸ್ಥೆಯಲ್ಲಿ ಮತದಾರರ ಅಭಿಪ್ರಾಯದಂತೆ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಬಹುತೇಕ ಮತದಾರರು ಬಿಜೆಪಿ ಸೇರ್ಪಡೆಯಾಗಬೇಕೆಂದು ಒತ್ತಡ ಹೇರಿದ್ದರು. ಹಾಗಾಗಿ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಸ್ಪಷ್ಟ ಪಡಿಸಿದರು.