ಬೆಂಗಳೂರು :
ಕಾಲಿಗೆ ವಿಷಕಾರಿ ಪಾದರಸ ಇಂಜೆಕ್ಷನ್ ಮಾಡಿ ಪತ್ನಿ ಕೊಲೆ ಮಾಡಿದ ಪತಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯು ಸಾವಿಗೂ ಮುನ್ನ ದಾಖಲಿಸಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ ಪತಿಯನ್ನು ಬಂಧಿಸಿದ್ದಾರೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ(37) ತನ್ನ ಪತಿ, ಮಾವನ ವಿರುದ್ಧ ಕೊಲೆ ಯತ್ನ ದೂರು ದಾಖಲಿಸಿದ್ದ ಕೆಲ ದಿನಗಳ ಬಳಿಕ ಸಾವನ್ನಪ್ಪಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ಸರ್ಜಾಪುರ ರಸ್ತೆಯ ತಿಲಕ್ ನಗರದ ನಿವಾಸಿಯ ಪತಿ ಬಸವರಾಜ್ ಮತ್ತು ಮಾವ ಮರಿಸ್ವಾಮಾಚಾರಿ ಸಂಚು ನಡೆಸಿ ಫೆಬ್ರವರಿ 26ರ ಶಿವರಾತ್ರಿಯಂದು ಪ್ರಜ್ಞೆತಪ್ಪಿಸಿ ಬಳಿಕ ತನ್ನ ಕಾಲಿಗೆ ಪಾದರಸ್ ಇಂಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಮಹಿಳೆ ಸಾವಿಗೂ ಮುನ್ನ ದೂರು ನೀಡಿದ್ದರು.
ಶಿವರಾತ್ರಿ ಮರುದಿನ ನಿದ್ದೆಯಿಂದ ಎದ್ದಾಗ ಬಲಗಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಬಳಿಕ ನಿತ್ರಾಣಳಾಗಿದ್ದಕ್ಕೆ ಚಿಕಿತ್ಸೆಗಾಗಿ ಅತ್ತಿಬೆಲೆ ಆಸ್ಪತ್ರೆಗೆ ಹೋದಾಗ ಕಾಲಿನ ಊತ ಹೆಚ್ಚಾಗಿದ್ದರಿಂದ ಹೆಚ್ಚಿನ ತಪಾಸಣೆಗೆ ಮಾರ್ಚ್ 7ರಂದು ಅತ್ತಿಬೆಲೆ ಆಕ್ಸಫರ್ಡ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಪರೀಕ್ಷೆಯ ಬಳಿಕ ವಿಷಕಾರಿ ಪಾದರಸದ ಅಂಶಗಳು ದೇಹದಲ್ಲಿ ಕಂಡು ಬಂದಿದ್ದವು. ಈ ಆಸ್ಪತ್ರೆಯಲ್ಲಿ ತಿಂಗಳ ಕಾಲ ಚಿಕಿತ್ಸೆ ಪಡೆದು ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿತ್ತು.
ವಿಷಕಾರಿ ಪಾದರಸ ಇಡೀ ದೇಹಕ್ಕೆ ಹರಡಿ ಕಿಡ್ನಿ ಸಮಸ್ಯೆ ಉಂಟಾಗಿ ಡಯಾಲಿಸಿಸ್ ಮೂಲಕ ಬದುಕುವಂತಾಗಿದೆ. ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಮದುವೆಯಾದಾಗಿನಿಂದ ಇವರು ನನಗೆ ಕಿರುಕುಳ ನೀಡಿದ್ದಾರೆ. ಬೇರೆ ಎಲ್ಲೂ ಹೋಗುವುದಕ್ಕೂ ಆಸ್ಪದ ಕೊಡುತ್ತಿರಲಿಲ್ಲ. ಜೊತೆಗೆ ನಾನು ಹುಚ್ಚಿ ಎಂದು ಎಲ್ಲರಿಗೂ ಸುಳ್ಳು ಹೇಳುತ್ತಿದ್ದರು. ನನಗೆ ಬೈದು ಹಲ್ಲೆ ಮಾಡುತ್ತಿದ್ದರು. ಸಾಯಿಸುವ ಉದ್ದೇಶದಿಂದಲೇ ನನ್ನ ಕಾಲಿಗೆ ವಿಷಕಾರಿ ಪಾದರಸದ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಗಂಡ ಬಸವರಾಜ್ ಮತ್ತು ಮಾವ ಮರಿಸ್ವಾಮಾಚಾರಿ ವಿರುದ್ಧ ಕಠಿಣ ಕಾನೂನು ಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ತಿಳಿಸಿದ್ದರು.
ಶಿವಮೊಗ್ಗ ಮೂಲದ ವಿದ್ಯಾ ಮತ್ತು ಅತ್ತಿಬೆಲೆ ಮೂಲದ ಬಸವರಾಜ್ 2020ರಲ್ಲಿ ಮದುವೆಯಾಗಿದ್ದರು. ಇವರಿಗೆ ನಾಲ್ಕು ವರ್ಷದ ಒಂದು ಗಂಡು ಮಗನಿದ್ದಾನೆ. ವಿಷಕಾರಿ ಪಾದರಸದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿದ್ಯಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅತ್ತಿಬೆಲೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿ ಮಹಿಳೆಯ ಪತಿ ಬಸವರಾಜ್ನನ್ನು ಬಂಧಿಸಿದ್ದಾರೆ.

