ಬೆಂಗಳೂರು,ಏ.12-ರಾಜ್ಯದ ವಿವಿಧ ಕೋ ಆಪರೇಟಿವ್ ಬ್ಯಾಂಕ್ ಗಳು ಚೆಕ್ ಡಿಸ್ಕೌಂಟ್ ಮೂಲಕ ಸುಮಾರು 1ಸಾವಿರ ಕೋಟಿ ರೂ. ಅಧಿಕ ಮೊತ್ತವನ್ನು ಸಂಶಯಾಸ್ಪದವಾಗಿ ಪಾವತಿ ಮಾಡಿರುವ ಪ್ರಕರಣವನ್ನು ಐಟಿ ಇಲಾಖೆ ಪತ್ತೆ ಮಾಡಿದೆ.
ಕಳೆದ ಮಾರ್ಚ್ 31 ರಂದು ರಾಜ್ಯದ ಕೆಲ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಶೋಧ ಕಾರ್ಯ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಮಾರು 16 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಈ ಅಕ್ರಮ ಪಾವತಿಯನ್ನು ಪತ್ತೆ ಹಚ್ಚಲಾಗಿದೆ” ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಬಿಡಿಟಿ ಮಾಹಿತಿ ಪ್ರಕಾರ, ಶೋಧ ಕಾರ್ಯ ವೇಳೆ ನಕಲಿ ವಹಿವಾಟಿನ ಅನೇಕ ದಾಖಲಾತಿಗಳು ಪತ್ತೆಯಾಗಿವೆ. ಕೋಪರೇಟಿವ್ ಬ್ಯಾಂಕ್ ಗಳು ವಿವಿಧ ಸಂಸ್ಥೆಗಳ ಚೆಕ್ ಗಳನ್ನು ನಕಲಿ ಸಂಸ್ಥೆಗಳ ಹೆಸರುಗಳಲ್ಲಿ ಡಿಸ್ಕೌಂಟ್ ಮಾಡಿ ಪಾವತಿ ಮಾಡುತ್ತಿರುವುದು ದಾಖಲೆಗಳಿಂದ ಪತ್ತೆಯಾಗಿವೆ.
ಚೆಕ್ ಡಿಸ್ಕೌಂಟ್ ವೇಳೆ ಯಾವುದೇ KYC ನಿಯಮವನ್ನು ಅನುಸರಿಸಿಲ್ಲ. ಚೆಕ್ ಡಿಸ್ಕೌಂಟ್ ಮಾಡಿ ಆ ಮೊತ್ತವನ್ನು ವಿವಿಧ ಕೋಪರೇಟಿವ್ ಸೊಸೈಟಿಗಳ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ದಿಮೆ ಸಂಸ್ಥೆಗಳು ಈ ರೀತಿಯ ನಕಲಿ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದವು.
ಚೆಕ್ ಡಿಸ್ಕೌಂಟ್:
ಕೆಲ ಕೋಪರೇಟಿವ್ ಸೊಸೈಟಿಗಳು ಬಳಿಕ ತಮ್ಮ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ನಗದು ಮೂಲಕ ಡ್ರಾ ಮಾಡಿ ಉದ್ದಿಮೆ ಸಂಸ್ಥೆಗಳಿಗೆ ಮರು ಪಾವತಿ ಮಾಡುತ್ತಿದ್ದವು. ಡ್ರಾ ಮಾಡಿದ ಹಣದ ಮೂಲವನ್ನು ಮರೆಮಾಚುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಚೆಕ್ ಡಿಸ್ಕೌಂಟ್ ಮಾಡಲಾಗುತ್ತಿತ್ತು. ಆ ಮೂಲಕ ಉದ್ದಿಮೆ ಸಂಸ್ಥೆಗಳು ಬೋಗಸ್ ವೆಚ್ಚವನ್ನು ತೋರಿಸುತ್ತಿದ್ದವು.
ಶೋಧ ಕಾರ್ಯ ವೇಳೆ ಈ ಕೋಪರೇಟಿವ್ ಬ್ಯಾಂಕುಗಳು ನಗದು ಜಮೆಯನ್ನು ಬಳಸಿ ಎಫ್ ಡಿಆರ್ ಖಾತೆಗಳನ್ನು ತೆರೆಯುತ್ತಿದ್ದವು. ಬಳಿಕ ಅವುಗಳನ್ನು ಸಾಲ ಮಂಜೂರಾತಿ ಮಾಡಲು ಬಳಸಲಾಗುತ್ತಿತ್ತು. ಈ ರೀತಿ ಸುಮಾರು 15 ಕೋಟಿ ರೂ. ಅಧಿಕ ದಾಖಲೆ ರಹಿತ ನಗದು ಸಾಲವನ್ನು ಕೆಲ ಗ್ರಾಹಕರುಗಳಿಗೆ ನೀಡಿರುವುದು ಐಟಿ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.
ಈ ಕೋ ಆಪರೇಟಿವ್ ಬ್ಯಾಂಕುಗಳು ತಮ್ಮ ರಿಯಲ್ ಎಸ್ಟೇಟ್ ಮತ್ತು ಇತರ ವಹಿವಾಟು ಮೂಲಕ ದಾಖಲೆ ರಹಿತ ಹಣವನ್ನು ಗಳಿಸುತ್ತಿದ್ದವು. ನಕಲಿ ವಹಿವಾಟು ಮೂಲಕ, ಬೋಗಸ್ ವೆಚ್ಚಗಳನ್ನು ತೋರಿಸಿ ಈ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿತ್ತು. ಶೋಧ ಕಾರ್ಯದಲ್ಲಿ ಐಟಿ ಇಲಾಖೆ ದಾಖಲೆಗಳಿಲ್ಲದ ಸುಮಾರು 3.3 ಕೋಟಿ ರೂ. ನಗದು ಮತ್ತು 2 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವ ಬಗ್ಗೆ ಐಟಿ ಇಲಾಖೆ ಮಾಹಿತಿ ನೀಡಿದೆ.