ಬೆಂಗಳೂರು, ಜ.5: ಬೆಂಗಳೂರು ನಗರದಲ್ಲಿ ಅರಣ್ಯ ಭೂಮಿ (Forest Land) ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಜಾರಕಬಂಡೆ ಕಾವಲ್ ಶ್ರೀಗಂಧದ ಮೀಸಲು ಅರಣ್ಯದ ಸರ್ವೆ ನಂ. 18 ಮತ್ತು 19ರಲ್ಲಿ 15 ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.
2017ರಲ್ಲೇ ಸದರಿ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರು ಸುತ್ತಮುತ್ತ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿಸಬೇಕು ಎಂದು ನಿರ್ದೇಶನ ಕೊಟ್ಟ ತರುವಾಯ ನಡೆದ ಎರಡನೇ ಒತ್ತುವರಿ ತೆರವು ಕಾರ್ಯಾಚರಣೆ ಇದಾಗಿದೆ.
1932ರ ಆಗಸ್ಟ್ 10ರಂದು ಸಂಖ್ಯೆನಂ. ಜಿ 1053-ಎಫ್.ಟಿ 42-32-2ರಂತೆ 444 ಎಕರೆ 12 ಗುಂಟೆ ಪ್ರದೇಶ ಜಾರಕಬಂಡೆ ಶ್ರೀಗಂಧ ಮೀಸಲು – ಕಾಯ್ದಿಟ್ಟ ಅರಣ್ಯ ಪ್ರದೇಶ (Forest Land) ಎಂದು ಅಧಿಸೂಚಿಸಲಾಗಿತ್ತು.
ಆದರೆ ಸದರಿ ಜಮೀನನ್ನು 1987ರಲ್ಲಿ ಕಾನೂನು ಬಾಹೀರವಾಗಿ ಭಾರತೀಯ ವಾಯುಪಡೆಗೆ ಹಂಚಿಕೆ ಮಾಡಿತ್ತು, ಆದರೆ ಸದರಿ ಜಮೀನು ಎಚ್.ಎಂ.ಟಿ. ವಶದಲ್ಲಿತ್ತು. ಆದರೆ, ಅರಣ್ಯ ಭೂಮಿಯನ್ನು ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಮಂಜೂರು ಮಾಡಲು ಬರುವುದಿಲ್ಲ ಎಂಬ ಅರಣ್ಯ ಇಲಾಖೆಯ ವಾದಕ್ಕೆ ಮನ್ನಣೆ ನೀಡಿ ಕರ್ನಾಟಕ ಸರ್ಕಾರದ ದಿ.9.10.2017ರ ಆದೇಶ ಸಂಖ್ಯೆ ಆರ್.ಡಿ. 228 ಎಲ್.ಜಿ.ಬಿ. 2017ರನ್ವಯ 444 ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಆದೇಶ ನೀಡಿದ್ದು, ಇಂದು ಬೆಂಗಳೂರು ಡಿಸಿಎಫ್ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ 15 ಎಕರೆ ಜಮೀನಿನ ಗೇಟಿಗೆ ಬೀಗ ಹಾಕಿ, ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಯಿತು.