ಬೆಂಗಳೂರು, ಸೆ.29 – ಮಹತ್ವದ ಬೆಳವಣಿಗೆಯೊಂದರಲ್ಲಿ ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ
ಹದಿನೈದು ವರ್ಷಗಳನ್ನು ಪೂರೈಸಿರುವ ಸರ್ಕಾರದ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ತೀರ್ಮಾನಿಸಿದೆ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳಲ್ಲಿನ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯದಲ್ಲಿನ ಹಳೆಯ ವಾಹನಗಳನ್ನು ನಾಶಪಡಿಸಲು ನೊಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ರ ಅಡಿಯಲ್ಲಿ 15 ವರ್ಷ ಪೂರೈಸಿರುವ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತ-ಹಂತವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ.
ಅತೀ ಹೆಚ್ಚು ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಮೊದಲು ನಾಶ ಪಡಿಸಲು ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಾಶಪಡಿಸಲು ಉದ್ದೇಶಿಸಿರುವ ವಾಹನದ ಮೇಲಿನ ಕೊನೆಯ ಒಂದು ವರ್ಷದಲ್ಲಿ ಸಾರಿಗೆ ಇಲಾಖೆಯ ಶಾಸನದ ಕ್ರಮದಡಿಯಲ್ಲಿ ದಾಖಲಾದ ಪ್ರಕರಣದ ದಂಡಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘಟನೆಯಡಿ ದಾಖಲಾದ ಪ್ರಕರಣಗಳಿಗೆ ಸೀಮಿತಗೊಳಿಸಿ ದಂಡಗಳ ವಸೂಲಾತಿಗಳಿಂದ ವಿನಾಯಿತಿ ನೀಡಲಾಗಿದೆ.
ಈ ವಿನಾಯಿತಿಯೂ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಮಾತ್ರ ಅನ್ವಯವಾಗುವಂತೆ ವಿನಾಯಿತಿ ನೀಡಲಾಗಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. 15 ವರ್ಷ ಮೀರಿದ ಸರ್ಕಾರಿ ವಾಹನಗಳ ನೊಂದಾಯಿತ ಪ್ರಮಾಣಪತ್ರವನ್ನು ನವೀಕರಿಸಲು ನಿಷೇಸಲಾಗಿದ್ದು, ಅಂತಹ ವಾಹನಗಳನ್ನು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನಗಳ ನಿಯಮದ ಪ್ರಕಾರ ನಾಶಪಡಿಸಬೇಕಾಗಿದೆ.