ಬೆಂಗಳೂರು,
ಬಿಎಂಟಿಸಿ ಸಿಬ್ಬಂದಿಯ ಮೇಲೆ ಹಲ್ಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ತಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು, ಬಸ್ ಚಾಲಕರು ಮತ್ತು ನಿರ್ವಾಹರು ಸ್ವರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದಾಗಿಯೂ ಮತ್ತೊಂದು ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ವರದಿಯಾಗಿದೆ.
ಅಕ್ಟೋಬರ್ 1 ರಂದು ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಗೆ ಹರ್ಷ ಸಿನ್ಹಾ ಅನ್ನೋ ಯುವಕ 2-3 ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ.
ಅಕ್ಟೋಬರ್ 4 ರಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್ ಬರುತ್ತಿದ್ದ ವೋಲ್ವೋ ಬಸ್ ನಲ್ಲಿ ಹೊಸ ರೋಡ್ ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕನೊಬ್ಬ ಕಂಡಕ್ಟರ್ ಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಲು ಮುಂದಾಗಿದ್ದ ಪ್ರಕರಣ ರೂಟ್ ನಂಬರ್ 360/5 KA-57 F 9002 ಬಸ್ ನಲ್ಲಿ ನಡೆದಿದೆ.
ಈಗ ಅದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದ್ದು ಪ್ರಯಾಣಿಕನೊಬ್ಬ ಕಲ್ಲಿನಿಂದ ಕಂಡಕ್ಟರ್ ತಲೆಯನ್ನು ಜಜ್ಜಲು ಬಂದಿದ್ದ ಘಟನೆ ನಡೆದಿದೆ. ಈ ಘಟನೆ ಕಳೆದ ಶುಕ್ರವಾರ ಟಿನ್ ಫ್ಯಾಕ್ಟರಿ ಬಳಿ KA-14F1107 ನಂಬರಿನ ಬಿಎಂಟಿಸಿ ಬಸ್ ನಲ್ಲಿ ನಡೆದಿದೆ.
ಕೆಲ ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಪ್ರಯಾಣಿಕ ಹೇಮಂತ್ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಎಸ್ಕೇಪ್ ಆಗಿದ್ದ. ನಂತರ 3 ದಿನದಿಂದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲು ಕಾಯುತಿದ್ದು ಅಕ್ಟೋಬರ್ 18ರ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಸ್ ಸ್ಟ್ಯಾಂಡ್ ನಲ್ಲಿ ಊಟ ಮಾಡುತ್ತಿರುವ ವೇಳೆ ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಕಂಡಕ್ಟರ್ ಸಂಗಪ್ಪನ ತಲೆಗೆ ಹೊಡೆದು ಎಸ್ಕೇಪ್ ಆಗಿದ್ದ.
ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಸೃಷ್ಟಿಯಾಗಿದ್ದು ಕಂಡಕ್ಟರ್ ಗಳು ತಮ್ಮ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

