45 ಲಕ್ಷ ರೂಪಾಯಿ ಮೌಲ್ಯದ ಕುರ್ಚಿಯಲ್ಲಿ ಕುಳಿತ ಯು.ಟಿ.ಖಾದರ್.
ಬೆಳಗಾವಿ,ಡಿ.9-
ಇದು ಅಂತಿಂಥ ಕುರ್ಚಿಯಲ್ಲ. ಬರೋಬ್ಬರಿ 45 ಲಕ್ಷ ರೂಪಾಯಿ. ಹಾಗಾದರೆ ಇದೇನು ಬೆಳ್ಳಿ ಅಥವಾ ಚಿನ್ನದ ಕುರ್ಚಿಯೇ ಎಂದು ಕೇಳಬೇಡಿ. ಇದು ರೋಸ್ ವುಡ್ ನಲ್ಲಿ ತಯಾರಿಸಿರುವ ಕುರ್ಚಿ
ಬೆಳಗಾವಿ ಸುವರ್ಣ ವಿಧಾನಸೌಧದ ಸೌಧ ವಿಧಾನಸಭೆ ಸಭಾಂಗಣದಲ್ಲಿ ಸಭಾಧ್ಯಕ್ಷರಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿ ಅಳವಡಿಸಲಾಗಿರುವ ಈ ಕುರ್ಚಿಯ ಮೌಲ್ಯ 45 ಲಕ್ಷ ರೂಪಾಯಿ.
ಇಂತಹ ದುಬಾರಿ ಮೌಲ್ಯ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಾದ ಸಭಾಧ್ಯಕ್ಷರಿಗಾಗಿ ಇದನ್ನು ತಯಾರಿಸಲಾಗಿದೆ.
ಈ ಪೀಠದಲ್ಲಿ ಸ್ವೀಕರ್ ಯು.ಟಿ.ಖಾದರ್ ಅವರು ಕುಳಿತು ಕಲಾಪ ನಡೆಸಿದರು.
Bengaluru ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಸುವರ್ಣಸೌಧದಲ್ಲಿ ಸಭಾಧ್ಯಕ್ಷರ ಪೀಠವನ್ನು ಸಿದ್ಧಪಡಿಸಲಾಗಿದೆ.
ಪೀಠವನ್ನು ಬೀಟೆ ಮರದಿಂದ ಮಾಡಲಾಗಿದೆ. ಈ ವಿಲಾಸಿ ಪೀಠಕ್ಕೆ ಸುಮಾರು 45 ಲಕ್ಷ ರೂ. ವೆಚ್ಚವಾಗಿದೆ. ಈ ಮುಂಚೆ ಸಾಮಾನ್ಯ ಮರದಿಂದ ಸರಳವಾಗಿ ಪೀಠವನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಇದೀಗ ಬದಲಾಯಿಸಿ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಧ್ಯಕ್ಷರ ಕುರ್ಚಿಯ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ
ಪೀಠದಲ್ಲಿ ಗಂಡ ಬೇರುಂಡ, ಉಳುವ ರೈತ, ಚರಕ ಸೇರಿ ವಿವಿಧ ಕುಸುರಿ ಕಲಾಕೃತಿಗಳೊಂದಿಗೆ ಈ ಕುರ್ಚಿ ಗಮನಸೆಳೆಯುತ್ತದೆ.