ಬೆಂಗಳೂರು,ಏ.17-
ಬರೋಬರಿ 50 ಕೋಟಿ ರೂಗಳಿಗೆ ವಿಶ್ವದಲ್ಲೇ ದುಬಾರಿಯಾಗಿರುವ ಸಿಂಹದಂತಿರುವ ನಾಯಿಯನ್ನು ಖರೀದಿ ಮಾಡಿದ್ದೇನೆ ಎಂದು ಬೀಗುತ್ತಿದ್ದ ಶ್ವಾನ ಪ್ರೇಮಿ ಸತೀಶ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಎನ್ನುವುದು ಸುಳ್ಳು ಎಂಬುದು ಗೊತ್ತಾಗಿದೆ.
ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಸತೀಶ್ 50 ಕೋಟಿ ರೂ. ಕೊಟ್ಟು ನಾಯಿ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವ ಇದನ್ನು ತೋಳ ನಾಯಿ ಎಂದೂ ಕರೆಯುತ್ತಾರೆ.
ನಗರದ ಶ್ವಾನಪ್ರಿಯ ಸತೀಶ್ ಹಲವು ಪ್ರಾಣಿದಯಾ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನಕ್ಕೆ ಬರುತ್ತಿರುತ್ತಾರೆ. ಅಲ್ಲದೇ ಸತೀಶ್ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ನಾಯಿಯೊಂದಿಗೆ ಹೋದರೂ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ಕಕೇಷ್ಯನ್ ಶೆಫರ್ಡ್:
ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಕಕೇಷ್ಯನ್ ಶೆಫರ್ಡ್ ನಾಯಿಯು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ನಾಯಿಯ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ನಾಯಿ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ.
ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಿಯನ್ ಶೆಫರ್ಡ್ ನಾಯಿಯನ್ನು ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಈ ತಳಿಯ ನಾಊ ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ ಎಂದು ಸತೀಶ್ ಈ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
