ನಿಮಗೆ ಆಕಾಶಕಾಯಗಳಲ್ಲಿ ಆಸಕ್ತಿ ಇದೆಯೇ? ಆಗಸದಲ್ಲಿ ನಡೆಯುವ ಚಮತ್ಕಾರಗಳನ್ನು ನೋಡುವುದು ನಿಮಗಿಷ್ಟವೇ? ಹಾಗಿದ್ದರೆ, ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ. ವರದಿಯೊಂದರ ಪ್ರಕಾರ, 2023 ರಲ್ಲಿ ಬೆರಗುಗೊಳಿಸುವ ಉಲ್ಕಾಪಾತಗಳು, ಸೂಪರ್ ಮೂನ್ , ಫುಲ್ ಮೂನ್, ಕುತೂಹಲಕಾರಿ ಗ್ರಹಣಗಳು ಸೇರಿದಂತೆ ಹಲವು ಚಮತ್ಕಾರಗಳು ಆಗಸದಲ್ಲಿ ನಡೆಯಲಿವೆಯಂತೆ. ಅಂಥಹುದೇ ಒಂದು ವಿಶೇಷ ಘಟನೆ ಸದ್ಯದಲ್ಲೇ ನಡೆಯಲಿದೆ. ಕಳೆದ 50,000 ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ಘಟನೆ ನಡೆಯಲಿದೆಯಂತೆ.
ಮಾರ್ಚ್ 2, 2022 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕೌಂಟಿಯಲ್ಲಿರುವ ಪಾಲೊಮಾರ್ ಒಬ್ಸರ್ವೇಟರಿ ಯಲ್ಲಿ Zwicky Transient Facility’s wide-field survey camera ಮೂಲಕ ಖಗೋಳಶಾಸ್ತ್ರಜ್ಞರು ಧೂಮಕೇತುವೊಂದನ್ನು ಗುರುತಿಸಿದ್ದರು. ಅದನ್ನು C/2022 E3 (ZTF) ಎಂದು ಹೆಸರಿಸಲಾಯಿತು. ವಿಶೇಷವೇನೆಂದರೆ, ಜನವರಿ 12, 2023 ರಂದು ಇದು ಸೂರ್ಯನ ಕಕ್ಷೆಯ ಅತಿ ಹತ್ತಿರಕ್ಕೆ ಸಮೀಪಿಸಲಿದೆಯಂತೆ. ಅಷ್ಟೇ ಅಲ್ಲ, ಫೆಬ್ರುವರಿ 1 ಮತ್ತು 2 ರ ನಡುವಿನಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಈ ಧೂಮಕೇತುವು ಭೂಮಿಯ ಕಕ್ಷೆಗೂ ಅತಿ ಹತ್ತಿರವಾಗಲಿದೆಯಂತೆ. ಅಂದರೆ ಭೂಮಿಗೂ, ಧೂಮಕೇತುವಿಗೂ ಇರಲಿರುವ ಅಂತರ ಕೇವಲ ಸುಮಾರು 42 million kilometers ಮಾತ್ರ. ಹಾಗಾಗಿ, ಮೂಲವೊಂದರ ಪ್ರಕಾರ, ಫೆಬ್ರುವರಿ 1 ಮತ್ತು 2 ರ ನಡುವೆ ಸಂಜೆಯ ಆಗಸದಲ್ಲಿ ಧ್ರುವ ನಕ್ಷತ್ರದ ಬಳಿ ಈ ಧೂಮಕೇತುವನ್ನು ಕಾಣಬಹುದು ಎನ್ನಲಾಗಿದೆ.
ಧೂಮಕೇತುವನ್ನು ಗುರುತಿಸುವುದು ಹೇಗೆ?
• ಧೂಮಕೇತುವನ್ನು ಅದರ ಬಾಲದಿಂದ ಗುರುತಿಸಬಹುದು. ಸೂರ್ಯನನ್ನು ಅತಿ ಹತ್ತಿರದಿಂದ ಪರಿಭ್ರಮಿಸುವ ಸಮಯದಲ್ಲಿ, ಅದರಲ್ಲಿರುವ ಆವಿಗಳು ಮತ್ತು ಇತರ ಪದಾರ್ಥಗಳು ಸೂರ್ಯನ ಶಾಖಕ್ಕೆ ಕರಗಿ ಹರಡಿಕೊಂಡು ಬಾಲದಂತೆ ಕಾಣುತ್ತವೆ.
• ಇದರ ಸುತ್ತ, ನಿರ್ಮಾಣವಾಗುವ ಹಸಿರು ಬಣ್ಣದ ಕೋಮಾ ಅಥವಾ ಹೊದಿಕೆಯೂ ಸಹ ಇದನ್ನು ಗುರುತಿಸಲು ಸಹಾಯಕಾರಿ.
ನಾಸಾ ಹೇಳಿರುವಂತೆ, ಜನವರಿ ಮತ್ತು ಫೆಬ್ರುವರಿ ಅವಧಿಯಲ್ಲಿ ಈ ಧೂಮಕೇತುವು ಸೂರ್ಯ ಮತ್ತು ಭೂಮಿಯ ಕಕ್ಷೆಗೆ ಹತ್ತಿರವಿರುವುದರಿಂದ ಉತ್ತರಾರ್ಧ ಗೋಳದಲ್ಲಿರುವವರು ಜನವರಿಯ ಸಮಯದಲ್ಲಿ ಮತ್ತು ದಕ್ಷಿಣಾರ್ಧ ಗೋಳದಲ್ಲಿರುವವರು ಫೆಬ್ರುವರಿಯ ಆರಂಭದ ದಿನಗಳಲ್ಲಿ, ಬೆಳಗಿನ ಆಗಸದಲ್ಲಿ ಬೈನಾಕ್ಯುಲರ್ ಮೂಲಕ ಈ ಧೂಮಕೇತುವನ್ನು ನೋಡಬಹುದಂತೆ.