ಬೆಂಗಳೂರು,ಆ.17- ಮಾದಕವಸ್ತು ಮಾರಾಟ, ರಕ್ತ ಚಂದನ ಸಾಗಾಣೆ, ಸುಲಿಗೆ, ಸರಗಳ್ಳತನ, ಮೊಬೈಲ್ ಸುಲಿಗೆ, ಮನೆಕಳವು, ಸೇವಕರಿಂದ, ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 61 ಮಂದಿ ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಉತ್ತರ ವಿಭಾಗದ ಪೊಲೀಸರು 89 ಪ್ರಕರಣಗಳನ್ನು ಪತ್ತೆ ಮಾಡಿ, 2 ಕೋಟಿ 40 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 57 ಲಕ್ಷ ಮೌಲ್ಯದ ಮಾದಕ ವಸ್ತು ಚರಸ್-1.9 ಕೆ.ಜಿ,33.10 ಲಕ್ಷ ಮೌಲ್ಯದ 662 ಗ್ರಾಂ ಎಂಡಿಎಂಎ, 5,40 ಲಕ್ಷ ಮೌಲ್ಯದ 27.960 ಕೆ.ಜಿ ಗಾಂಜಾ 35 ಲಕ್ಷ ಮೌಲ್ಯದ 722.4 ಕೆ.ಜಿ.ರಕ್ತ ಚಂದನ, 31.91ಲಕ್ಷ ಮೌಲ್ಯದ 748 ಗ್ರಾಂ ಚಿನ್ನ, 2,53 ಲಕ್ಷ ಮೌಲ್ಯದ 4.2ಕೆಜಿ ಬೆಳ್ಳಿ, 24,36 ಲಕ್ಷ ಮೌಲ್ಯದ 51 ದ್ವಿಚಕ್ರವಾಹನ, 6,20 ಲಕ್ಷ ಮೌಲ್ಯದ 7 ತ್ರಿಚಕ್ರವಾಹನ, 3.4 ಲಕ್ಷ ನಗದು, ನಾಡ ಪಿಸ್ತೂಲ್-1, 11 ಜೀವಂತ ಗುಂಡುಗಳು, 7 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ಹೆಬ್ಬಾಳ ಪೊಲೀಸರು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ 1.9 ಕೆ.ಜಿ. ಚರಸ್ ಹಾಗು 5.1 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇದಲ್ಲದೇ 35 ಲಕ್ಷ ರೂ. ಬೆಲೆ ಬಾಳುವ 722.4 ಕೆ.ಜಿ. ರಕ್ತ ಚಂದನವನ್ನು ವಶಪಡಿಸಿಕೊಳ್ಳಲಾಗಿದೆ.
ಪೀಣ್ಯ ಪೊಲೀಸರು ನಾಲ್ವರು ಮನೆ ಬಾಡಿಗೆಯಿದೆಂದು ಕೇಳಿಕೊಂಡು ಚಾಕು ತೋರಿಸಿ, ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ಸುಲಿಗೆ ಮಾಡಿದ್ದು ಅವರನ್ನು ಬಂಧಿಸಿ 70 ಗ್ರಾಂ ಚಿನ್ನ, 120 ಗ್ರಾಂ ಬೆಳ್ಳಿ, 4-ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸಂಜಯನಗರ ಪೊಲೀಸರು ಹೋಟೆಲ್‍ನಲ್ಲಿ ಊಟ ಮಾಡಿ ಕಾರಿನಲ್ಲಿ ಕುಳಿತುಕೊಳ್ಳಲು ಹೋದಾಗ ಇಬ್ಬರು ಏಕಾಏಕಿ ಕಾರಿನೊಳಗೆ ಕುಳಿತುಕೊಂಡು ಗನ್ ತೋರಿಸಿ, ದೇವನಹಳ್ಳಿ ರಸ್ತೆಗೆ ಕರೆದುಕೊಂಡು ಹೋಗಿ ಕೆಳಗಿಳಿಸಿ ವಾಹನ ಹಾಗು ಅದರಲ್ಲಿದ್ದ ಲ್ಯಾಪ್‍ಟಾಪ್, ಐಪಾಡ್ ಸಮೇತ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ನಾಡಪಿಸ್ತೂಲ್‍ಅನ್ನು ಮತ್ತು 11 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಂಗಮ್ಮಗುಡಿ ಪೊಲೀಸರು ಏಕಾಏಕಿ ಮನೆಯೊಳಗೆ ನುಗ್ಗಿ ಮಾಲೀಕರ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಹಲ್ಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಆತನಿಂದ 100 ಗ್ರಾಂ ಚಿನ್ನಾಭರಣ, 1.04 ಲಕ್ಷ ರೂ.ನಗದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಜೆ.ಸಿ.ನಗರ ಪೊಲೀಸರು ಮನೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ ನಗದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 200 ಗ್ರಾಂ ಚಿನ್ನ, 2 ಲಕ್ಷ ನಗದು, 1 ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಲದೇವನಹಳ್ಳಿ ಪೊಲೀಸರು ಹೆಸರಘಟ್ಟದ ಆರ್.ಎಫ್.ಎಫ್. ವಸತಿ ಗೃಹದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸ್ನೇಹಿತೆಯೊಂದಿಗೆ ವಾಯುವಿಹಾರದಲ್ಲಿದ್ದಾಗ ಇಬ್ಬರು ಆರೋಪಿಗಳು ಬೈಕಿನಲ್ಲಿ ಬಂದು ಚಾಕು ತೋರಿಸಿ ಅವರ ಚಿನ್ನದ ಮಾಂಗಲ್ಯ ಸರಗಳನ್ನು ಮತ್ತು ಮೊಬೈಲ್ ಅನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 30 ಗ್ರಾಂ ಚಿನ್ನಸರವನ್ನು ಜಪ್ತಿ ಮಾಡಲಾಗಿದೆ
ಆರ್.ಎಂ.ಸಿಯಾರ್ಡ್ ಪೊಲೀಸರು ಕ್ಯಾಂಟರ್ ನಲ್ಲಿ ಹೋಗುವಾಗ ಪೊಲೀಸ್ ಹೆಲ್ಮೆಟ್ ಹಾಕಿಕೊಂಡು ಬಂದ ಒಬ್ಬ ವ್ಯಕ್ತಿ ವಾಹನ ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸಿ ಕೆಳಗೆ ಇಳಿದಾಗ ಪಿರ್ಯಾದಿಗೆ ಚಾಕು ತೋರಿಸಿ ಮೊಬೈಲ್‍ಅನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ, 1-ಮೊಬೈಲ್‍ಅನ್ನು ವಶಪಡಿಸಿಕೊಂಡಿದ್ದಾರೆ.
ಪೀಣ್ಯ ಪೊಲೀಸರು ಚಾಕುವಿನಿಂದ ಹಲ್ಲೆ ಮಾಡಿ, ಮೊಬೈಲ್‍ಅನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮಹಾಲಕ್ಷ್ಮೀಲೇಔಟ್ ಪೊಲೀಸರು ದ್ವಿಚಕ್ರವಾಹನದಲ್ಲಿ ಬಂದು ಏಕಾಏಕಿ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 29 ಗ್ರಾಂ ತೂಕದ ಚಿನ್ನದ ಸರಗಳು ಹಾಗು ಕೃತ್ಯಕ್ಕೆ ಬಳಸಿದ, 1-ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು 2 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ.
ರಾಜಾಜಿನಗರ ಪೊಲೀಸರು ಮಹಿಳೆಯೊಬ್ಬರು
ದ್ವಿಚಕ್ರವಾಹನದಲ್ಲಿ ಹೋಗುವಾಗ ಅವರ ಕುತ್ತಿಗೆಯಿಂದ 40 ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ, 40 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಾಮಪುರ ಪೊಲೀಸರು ಶ್ರೀರಾಮಪುರ, 3ನೇ ಕ್ರಾಸ್ ನಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ದೇವರ ದರ್ಶನಕ್ಕೆ ಬಂದು ಗರ್ಭಗುಡಿಗೆ ಹೋಗಿ ದೇವಿಯ ಕೊರಳಿನಲ್ಲಿದ್ದ ಸರ ಮತ್ತು ತಾಳಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ 4.7 ಲಕ್ಷ ರೂ. ಬೆಲೆ ಬಾಳುವ 119 ಗ್ರಾಂ ಚಿನ್ನಮತ್ತು 450 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಬ್ರಮಣ್ಯನಗರ ಪೊಲೀಸರು ಸುಮಾರು 7 ವರ್ಷ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ 3.44 ಕೆ.ಜಿ. ಬೆಳ್ಳಿತನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಉತ್ತರ ವಿಭಾಗದ 4 ಪೊಲೀಸ್ ಠಾಣೆಗಳಲ್ಲಿ ತ್ರಿಚಕ್ರವಾಹನ ಕಳವು ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, 7 ತ್ರಿಚಕ್ರವಾಹನಗಳನ್ನು ವಶಪಡಿಸಿಕೊಂಡು, 7 ಪ್ರಕರಣಗಳನ್ನು (ನಂದಿನಿಲೇಔಟ್-2, ಆರ್.ಎಂ.ಸಿ.ಯಾರ್ಡ್-3, ಪೀಣ್ಯ-1, ಜೆ.ಸಿ.ನಗರ-1) ಪತ್ತೆ ಮಾಡಿರುತ್ತಾರೆ.
ಉತ್ತರ ವಿಭಾಗದ 11 ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ 15 ಜನ ಆರೋಪಿಗಳನ್ನು ಜಪ್ತಿ ಮಾಡಿ 51 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡು, 51 ಪ್ರಕರಣಗಳನ್ನು (ಸೋಲದೇವನಹಳ್ಳಿ-11, ಪೀಣ್ಯ-10, ಆರ್.ಟಿ.ನಗರ-9, ಸುಬ್ರಮಣ್ಯನಗರ-7, ಹೆಬ್ಬಾಳ-4, ನಂದಿನಿಲೇಔಟ್-3, ಬಾಗಲಗುಂಟೆ-2, ಶ್ರೀರಾಮಪುರ-2, ಮಹಾಲಕ್ಷ್ಮೀಲೇಔಟ್-1, ಆರ್.ಎಂ.ಸಿ.ಯಾರ್ಡ್-1, ಮಲ್ಲೇಶ್ವರ-1) ಪತ್ತೆ ಮಾಡಿರುತ್ತಾರೆ.
ಉತ್ತರ ವಿಭಾಗದಲ್ಲಿ 2022 ನೇ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಒಟ್ಟು 89 ಪ್ರಕರಣಗಳನ್ನು ಪತ್ತೆ ಮಾಡಿ, 61 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
Previous Articleರಾ ರಾ ರಕ್ಕಮ್ಮ ಜೈಲಿಗೆ ಹೋಗ್ತಾರಾ?
Next Article ವಿಚ್ಛೇದನಕ್ಕೆ ಮುಂದಾದ ನಟಿ ಪ್ರಿಯಾಮಣಿ?