ಚಿತ್ರದುರ್ಗ: ಮೆದುಳನ್ನು ಬಳಸಿದಷ್ಟೂ ಅದು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ, ‘ಸಮೂಹ ಶಕ್ತಿ’ಯ ಸಂಸ್ಥಾಪಕ ದೀಪಕ್ ತಿಮ್ಮಯ ಅಭಿಪ್ರಾಯಪಟ್ಟರು.
ನಿಮ್ಮ ಮೆದುಳಿಗೆ ಕೆಲಸ ಕೊಟ್ಟು ಮೆದುಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಕಾರ್ಯವನ್ನು ಸಮೂಹ ಶಕ್ತಿ ಸಂಘಟನೆ ಮಾಡುತ್ತಿದೆ ಎಂದು ದೀಪಕ್ ತಿಮ್ಮಯ ಹೇಳಿದರು.
ಚಿತ್ರದುರ್ಗದ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಭಾನುವಾರ ಸಮೂಹ ಶಕ್ತಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಯಾವುದೇ ವ್ಯಕ್ತಿಗೆ ಶಕ್ತಿ ಕೊಡುವ ಕೆಲಸ ಮಾತಿನಿಂದ ಸಾಧ್ಯ. ಹೀಗಾಗಿ ಧನಾತ್ಮಕವಾಗಿ ಮಾತನಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿವಿ ಹೌಸ್ ಸಂಸ್ಥೆಯ ಸಿಇಒ ವಿನಾಯಕ ರಾಮಕೃಷ್ಣ ಮಾತನಾಡಿ, ಇಂದಿನ ಸಮಾಜದಲ್ಲಿ ನಾಗರಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮಹತ್ತರ ಕಾರ್ಯವಾಗಿದೆ. ಎಲ್ಲರೂ ಸೇರಿದರೆ ಸಮಾಜ ಬದಲಾವಣೆ ಸಾಧ್ಯ ಎಂದರು.
ಹಿರಿಯ ನಾಯಕ ನಾಗರಕಟ್ಟೆ ಲೋಕೇಶ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಸಮೂಹ ಶಕ್ತಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ಒಳ್ಳೆಯದನ್ನು ರೂಢಿಸಿಕೊಂಡಿದ್ದೇನೆ ಎಂದು ಹೇಳಿದರು.
ಬದುಕಿದ್ದಾಗ ನಾವೇನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನನಗೇಕೆ ಬೇಕು ಎನ್ನುವ ಧೋರಣೆಯನ್ನು ನಾವು ಬಿಡಬೇಕು ಎಂದು ಸಮೂಹ ಶಕ್ತಿಯ ಸಂಘಟನಾ ಕಾರ್ಯದರ್ಶಿ ರವಿ ಕಂಚನಾಳ ಹೇಳಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ್ ಚನ್ನಗಿರಿ, ರುದ್ರಮ್ಮ ಮತ್ತಿತರರು ಮಾತನಾಡಿದರು. ಚನ್ನಗಿರಿ, ಶಿವಪುರ ಸೇರಿದಂತೆ ವಿವಿಧ ಗ್ರಾಮಗಳ ಸಮೂಹ ಶಕ್ತಿ ಸದಸ್ಯರಲ್ಲದೆ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.