ಗದಗ: ತೆಂಗಿನ ಗರಿಯಿಂದ ಹಾಕಿದ ಚೆಪ್ಪರವೇ ಆ ಊರಿನ ಬಸ್ ನಿಲ್ದಾಣವಂತೆ. ಅರದ ಉದ್ಘಾಟನೆಯನ್ನು ಎಮ್ಮೆಯಿಂದ ಮಾಡಿಸುವುದಂತೆ. ಅರೇ ಇದೇನಪ್ಪ ಅಂದ್ಕೊಳ್ಳೋದು ಸಹಜ ಅಲ್ವಾ?
ಹೌದು ಊರಿನ ಬಸ್ ನಿಲ್ದಾಣವೆಂದ ಮೇಲೆ ಎಮ್.ಎಲ್.ಎ ಅವರು ಉದ್ಘಾಟಿಸುವುದು ಸಹಜ. ಆದರೆ ಈ ಊರಿನಲ್ಲಿ ಮಾತ್ರ ಎಮ್.ಎಲ್.ಎ ಬದಲು ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟಿಸಿದ್ದಾರೆ. ಅಷ್ಟಕ್ಕೂ ಅದು ನಿಜವಾದ ಬಸ್ ನಿಲ್ದಾಣವಲ್ಲ. ತೆಂಗಿನ ಗರಿಯಿಂದ ಗ್ರಾಮಸ್ಥರೇ ಹಾಕಿದ ಚೆಪ್ಪರವನ್ನೆ ಬಸ್ ನಿಲ್ದಾಣವೆಂದು ಉದ್ಘಾಟಿಸಲಾಯಿತು. ಅಷ್ಟಕ್ಕೆ ಇದೆಲ್ಲಾ ಯಾಕೆ? ಅಂತ ನೋಡುವುದಾದರೆ ಈ ಮೂಲಕ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮಸ್ಥರು ಅಣಕವಾಡಿ ವ್ಯವಸ್ಥೆ ಹಾಗು ಜನಪ್ರತಿನಿಧಿಯ ವಿರುದ್ಧ ತಮ್ಮ ಸಾತ್ವಿಕ ಆಕ್ರೋಶವನ್ನು ಹೊರಹಾಕಿದ ಘಟನೆ ನಡೆಯಿತು.
ಇದೊಂದು ವಿನೂತನ ಪ್ರತಿಭಟನೆಯೂ ಹೌದು. ಬಾಲೇಹೊಸೂರು ಗ್ರಾಮದಲ್ಲಿ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ತೆಂಗಿನ ಗರಿಯ ಮೂಲಕ ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನು ನಿರ್ಮಿಸಿ ಉದ್ಘಾಟನೆ ಮಾಡಲಾಯ್ತು.
ಕಿತ್ತು ಹೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನು ಚೀಫ್ ಗೆಸ್ಟ್ ಮಾಡಲಾಗಿತ್ತು. ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿದೆ. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸೂಕ್ತ ಭರವಸೆ ಸಿಕ್ಕಿರಲಿಲ್ವಂತೆ. ಹೀಗಾಗಿ ಗ್ರಾಮಸ್ಥರು ಚಪ್ಪರದ ಬಸ್ ನಿಲ್ದಾಣ ಮಾಡಿ, ಉದ್ಘಾಟನೆಯನ್ನೂ ಮಾಡಿದ್ದಾರೆ.
ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ಮಾಣವಾಗಿತ್ತು.
ಬಸ್ ನಿಲ್ದಾಣಕ್ಕಾಗಿ ಮನವಿ ಸಲ್ಲಿಸಿ ರೋಸಿ ಹೋಗಿದ್ದರಿಂದ ರೈತರು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೂ ಸ್ಪಂದನೆ ಸಿಗದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.