ತುಮಕೂರು : ಅನ್ನದಲ್ಲಿ ಕಲ್ಲು ಸಾಂಬರಿನಲ್ಲಿ ಹುಳು, ವಿದ್ಯಾರ್ಥಿಗಳಿಗೆ ಕೊಠಡಿ ಹಾಗು ಮೂಲಭೂತ ಸೌಕರ್ಯಗಳ ಕೊರತೆ. ಇದು ಶಿಕ್ಷಣ ಸಚಿವರ ಕ್ಷೇತ್ರದ ಶಾಲೆಯ ಕಥೆ.
ಹೀಗೆ ಊಟ ತಟ್ಟೆ ಹಿಡಿದು ವಿದ್ಯಾರ್ಥಿಗಳು ‘ಸಾರ್… ಅನ್ನದಲ್ಲಿ ಕಲ್ಲು.. ಸಾಂಬಾರಿನಲ್ಲಿ ಹುಳು’ ಅಂತಾ ಇಷ್ಟೆಲ್ಲಾ ಸಮಸ್ಯೆಗಳಿರುವುದು ರಾಜ್ಯದ ಯಾವುದೋ ಮೂಲೆಯಲ್ಲಿರುವ ಗಡಿಭಾಗದ ತಾಲೂಕಿನಲ್ಲಿ ಅಲ್ಲವೇ ಅಲ್ಲ ಶಿಕ್ಷಣ ಸಚಿವರ ತವರು ಕ್ಷೇತ್ರ ತಿಪಟೂರಿನಲ್ಲಿ. ಹೌದು ಸುಮಾರು 400 ವಿದ್ಯಾರ್ಥಿಗಳಿರುವ ತಿಪಟೂರು ನಗರದ ಹಳೇಪಾಳ್ಯಾ ಸರ್ಕಾರಿ ಶಾಲೆಯಲ್ಲಿ ಈ ದುಸ್ಥಿತಿ ಮಕ್ಕಳಿಗೆ ಎದುರಾಗಿದೆ.
ನಿತ್ಯವು ಮಕ್ಕಳಿಗೆ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ನೀಡಲಾಗುವ ಊಟದಲ್ಲಿ ಸ್ವಚ್ಚ ಮಾಡದ ದವಸ ಧಾನ್ಯಗಳಿಂದ ಹಾಗು ಕೊಳೆತ ತರಕಾರಿಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇನ್ನು ಶಾಲೆಯಲ್ಲಿ ಹಲವು ಕೊಠಡಿಗಳ ಮೇಲ್ಚಾವಣಿಗಳು ಮುರಿದು ಬಿದ್ದಿದ್ದು ಪೋಷಕರೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಸದ್ಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಚಿವರು ಆದಷ್ಟು ಬೇಗ ಇತ್ತ ಗಮನ ಹರಿಸುತ್ತಾರ ಕಾದು ನೋಡಬೇಕಿದೆ. ಶಿಕ್ಷಣ ಇಲಾಖೆಯಲ್ಲಿ ಹಲವು ನೂತನ ಯೋಜನೆಗಳನ್ನು ಜಾರಿ ಮಾಡುವ ಚಿಂತನೆಯಲ್ಲಿರುವ ಸಚಿವ ಬಿಸಿ ನಾಗೇಶ್ ಅವರಿಗೆ ತಮ್ಮ ತವರಿನ ಶಾಲೆಯ ನ್ಯೂನತೆ ಕಾಣ್ತಾ ಇಲ್ವಾ ಅನ್ನೋದು ಹಲವರ ಪ್ರಶ್ನೆ.