ಬೆಂಗಳೂರು : ಪೂಜಾ ಸಮಯದಲ್ಲಿ ಮೈಕ್ ನಿಂದ ಜೋರಾಗಿ ಶಬ್ದ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಮಲ್ಲೇಶ್ವರಂ ಪೊಲೀಸರು ನೋಟೀಸ್ ಜಾರಿ ಗೊಳಿಸಿದ್ದಾರೆ.
ಮಲ್ಲೇಶ್ವರಂ 11ನೇ ಕ್ರಾಸ್‍ನಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಸಮಯದಲ್ಲಿ ಧ್ವನಿವರ್ದಕದ ಮೂಲಕ ಜೋರಾಗಿ ಮಂತ್ರ ಘೋಷ,ಗಂಟರ ಜಾಗಟೆಯ ಧ್ವನಿ ಹೊರಬರುತ್ತದೆ.
ಇದರಿಂದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಮೌಖಿಕವಾಗಿ ಬಂದಿರುವ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ 2000 ರ ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮೀರದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಬೇಕು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ
ಈ ನಿಯಮದ ಅನುಸಾರ ಪೊಲೀಸರು ನೋಟೀಸ್ ನೀಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಉತ್ತರ ಪ್ರದೇಶದಲ್ಲಿನ ಮಥುರಾದ ಕೃಷ್ಣ ದೇವಾಲಯದಲ್ಲಿ ಧ್ವನಿ ವರ್ಧಕ ಬಳಕೆಗೆ ನಿರ್ಬಂಧ ವಿಧಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ಹೊರಡಿಸಿರುವುದನ್ನು ಇಲ್ಲಿ ಗಮನಿಸಬೇಕು.