ಮಂಗಳೂರು: ಸುಳ್ಯ ತಾಲೂಕಿನ ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೋರ್ವನ ಮೇಲೆ 8 ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಯುವಕ ಮಸೂದ್(18) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿ ಹಲ್ಲೆ ನಡೆಸಿದ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬ 8ಮಂದಿ ಆರೋಪಿಗಳನ್ನು ಬೆಳ್ಳಾರೆ ಠಾಣಾ ಪೊಲೀಸರು ಘಟನೆ ನಡೆದ 24ಗಂಟೆಗಳಲ್ಲಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಮೂಲತಃ ಕಾಸರಗೋಡಿನ ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ತಿಂಗಳ ಹಿಂದೆ ಸುಳ್ಯದ ಕಳಂಜಕ್ಕೆ ಬಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದನು. ಜು. 19ರ ಸಂಜೆ ಮಸೂದ್ ಹಾಗು ಸುಧೀರ ಎಂಬಾತನ ನಡುವೆ ಸಮೀಪದ ಅಂಗಡಿ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಹೊಡೆದಾಟ ನಡೆದಿದೆ. ಈ ವೇಳೆ ಸುಧೀರ್‌ಗೆ ಮಸೂದ್ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ಅದೇ ದಿನ ರಾತ್ರಿ ಇದೇ ವಿಚಾರವಾಗಿ ರಾಜಿ ಪಂಚಾಯಿತಿಕೆಗೆಂದು ಮಸೂದ್‌ನನ್ನು ಕರೆಸಿ ಮಾತುಕತೆ ವೇಳೆ ಮಾತಿನ ಚಕಮಕಿ ನಡೆದಿದ್ದು, ಬಳಿಕ 8ಮಂದಿ ಆರೋಪಿಗಳು ಏಕಾಏಕಿ ಮಸೂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಅಭಿಲಾಷ್ ಸೋಡಾ ಬಾಟಲಿಯಿಂದ ಮಸೂದ್‌ನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಸೂದನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.