ಸಿದ್ಧರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮೋತ್ಸವದ ಅಗತ್ಯವಿರಲಿಲ್ಲ, ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಮೊನ್ನೆ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ, ಕಾಂಗ್ರೆಸ್ ಪುಂಗಿ ಊದುವವರು ಯಾರು? ಎಂದು ಲೇವಡಿ ಮಾಡಿದರು.
ಸಿದ್ದರಾಮೋತ್ಸವದ ಬದಲು ಕಾಂಗ್ರೆಸ್ಸಿನ ಉತ್ಸವ ಆಗಬೇಕು. ಇಂದಿರಾಗಾಂಧಿ, ಡಿ ದೇವರಾಜ ಅರಸುರವರ ಸ್ಮರಣೆ ಮಾಡಬೇಕು. ಸಿದ್ದರಾಮಯ್ಯ ಮಾತೆತ್ತಿದರೇ, ಅನ್ನಭಾಗ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ನಾನು ಶಿಕ್ಷಣ ಸಚಿವನಾಗಿದ್ದೆ. ಆಗಲೇ ಬಿಸಿಯೂಟ ಯೋಜನೆ ಜಾರಿಗೊಳಿಸಿದೆವು. 85 ಲಕ್ಷ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ನಾವು ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದೆವು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಅದಕ್ಕೂ ಬಾಗಿಲು ಹಾಕಿದರು. ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇರಬಾರದು ಎಂದರು.
ಜಾತಿ ರಾಜಕಾರಣ ಅತಿಯಾದರೆ ಒಳ್ಳೆಯದಲ್ಲ. ಪ್ರತಿಯೊಬ್ಬರೂ ತಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಜಾತಿ ರಾಜಕಾರಣ ಮಾಡುವ ಅವಶ್ಯವಿದೆ. ಆದರೆ ಜಾತಿ ರಾಜಕಾರಣ ಅತಿಯಾಗಬಾರದು. ಎಲ್ಲಾ ಜಾತಿಗಳು, ಧರ್ಮೀಯರು ಬೆಂಬಲಿಸಿದರೆ ಮಾತ್ರ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕಾಂಗ್ರೆಸ್ ನಲ್ಲಿ ಒಕ್ಕಲಿಗ ವರ್ಸಸ್ ಅಲ್ಪಸಂಖ್ಯಾತ ರಾಜಕಾರಣ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು.