ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವ ಕುರಿತಾದ ತಕರಾರು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ಗುರುವಾರಕ್ಕೆ ಮುಂದೂಡಿದೆ.
ಚುನಾವಣೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠಕ್ಕೆ ಆಯೋಗ ಪ್ರಮಾಣಪತ್ರ ಸಲ್ಲಿಸಿ, ರಾಜ್ಯ ಸರ್ಕಾರ ಕೋರ್ಟ್ ಆದೇಶವಿದ್ದರೂ ವಾರ್ಡ್ ವರ್ಗೀಕರಣ ಹಾಗು ಮೀಸಲಾತಿ ಪಟ್ಟಿ ನೀಡಿಲ್ಲ.ಹೀಗಾಗಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿತು.
ಇದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿತು.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ರಚಿಸಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಸಮಿತಿ ಗುರುವಾರವಷ್ಟೇ ವರದಿ ಸಲ್ಲಿಸಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕಿದೆ. ಆ ಬಳಿಕ 243 ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸಬೇಕಿದೆ. ಆರಂಭದಲ್ಲಿ ಮೀಸಲಾತಿ ಪಟ್ಟಿಯ ಕರಡು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಬೇಕಿದೆ. ಜನರ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕಿದೆ. ಮೀಸಲಾತಿ ಪಟ್ಟಿ ಅಂತಿಮಗೊಂಡ ನಂತರ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೋರಲಾಗುವುದು ಎಂದು ತಿಳಿಸಿತು.ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
Previous ArticleCM ಪ್ರಧಾನ ಕಾರ್ಯದರ್ಶಿ ಹೆಸರಲ್ಲಿ ವಂಚನೆ..?
Next Article ವಿಡಿಯೋದಿಂದ ಸಿಕ್ಕಿಬಿದ್ದ ಉಗ್ರ..!