ಬೆಂಗಳೂರು, ಜು.27- ಭ್ರಷ್ಟಾಚಾರದ ಗಂಗೋತ್ರಿಯನ್ನೇ ಹೊತ್ತು ಕೊಂಡಿರುವ ಕಾಂಗ್ರೆಸ್‍ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಹಿಂದಿನ ಅಧ್ಯಕ್ಷ ರಾಹುಲ್‍ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಡಿ ವಿಚಾರಣೆಗೆ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಇಂತಹವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮಾಡಬಾರದ್ದನ್ನೆಲ್ಲಾ ಮಾಡಿ ಈಗ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುವ ದುಸ್ಥಿತಿಗೆ ಬಂದಿದ್ದಾರೆ. ಜೈಲು, ಬೇಲ್ ಮೇಲೆ ಇರುವವರೆಲ್ಲಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ದುರದೃಷ್ಟಕರ ಎಂದರು.
ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ವರ್ತನೆ ಮಾಡಲಿ. ನಿಮ್ಮ ಐದು ವರ್ಷದ ಆಡಳಿತಾವಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದ್ದವು ಎಂಬುದು ನಮಗೂ ಗೊತ್ತು. ಸೂಕ್ತ ಸಂದರ್ಭದಲ್ಲಿ ಅವರ ಕಾಲದ ಹಗರಣಗಳನ್ನು ಬಿಚ್ಚಿಡುತ್ತೇವೆಂದು ಎಚ್ಚರಿಸಿದರು.
ನಮ್ಮ ಪಕ್ಷದ ವತಿಯಿಂದ ನಡೆಯುತ್ತಿರುವ ಸಮಾವೇಶವನ್ನು ಭ್ರಷ್ಟೋತ್ಸವ ಎನ್ನಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ನಿಮ್ಮಿಂದ ನಮಗೆ ಯಾವುದೇ ಪ್ರಮಾಣ ಪತ್ರವೂ ಬೇಕಿಲ್ಲ. ಐದು ವರ್ಷದಲ್ಲಿ ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರೆ ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಏಕೆ ಕೂರಿಸುತ್ತಿದ್ದರು ಎಂದು ಪ್ರಶ್ನಿಸಿದರು.
ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ ವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ರೈತರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರಿಗೆ ನಮ್ಮ ಸರ್ಕಾರ ಏನೆಲ್ಲಾ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆಯೇ. ಅದರ ಫಲಾನುಭವಿಗಳು ಭಾಗವಹಿಸಲಿದ್ದಾರೆ.
ನಾಳೆ ಸಾಧ್ಯವಾದರೆ ಕಾಂಗ್ರೆಸ್ ನಾಯಕರು ಬಂದು ನೋಡಲಿ ಎಂದರು.ಜನರಿಂದ ಪ್ರಮಾಣ ಬೇಕೇ ಹೊರತು ಕಾಂಗ್ರೆಸ್‍ನಿಂದ ಪ್ರಮಾಣ ಪತ್ರ ಬೇಕಾಗಿಲ್ಲ. ನಾವು ಜನರ ಮಧ್ಯೆ ಇದ್ದುಕೊಂಡು ಜನೋತ್ಸವ ಮಾಡುತ್ತಿದ್ದೇವೆ. ಇವರ ಹಾಗೆ ವ್ಯಕ್ತಿ ಆಧಾರಿತ ಅಥವಾ ವ್ಯಕ್ತಿ ಪೂಜೆ ಮಾಡುತ್ತಿಲ್ಲ. ಕಾಂಗ್ರೆಸ್‍ಗೂ ಬಿಜೆಪಿಗೂ ಇರುವ ವ್ಯಾತ್ಯಾಸ ಇದೇ ಎಂದು ವಾಗ್ದಾಳಿ ನಡೆಸಿದರು.
Previous Articleಗೃಹ ಮಂಡಳಿ ನಿರ್ಮಿಸಿದ ಲೇಔಟ್ ನಲ್ಲಿ ತಾರತಮ್ಯ ಆರೋಪ
Next Article ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ