ಕಂದಾಯ ಇಲಾಖೆಯ ಭೂಸರ್ವೇಕ್ಷಣೆ ಮತ್ತು ನಕ್ಷೆ ಇಲಾಖೆ ಮುಖ್ಯಸ್ಥರಾಗಿ ಮೌನೀಶ್ ಮುದ್ಗೀಲ್ ನೇಮಕಗೊಂಡ ನಂತರ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳಾಗಿವೆ.
ಸಾರ್ವಜನಿಕರು, ಸರ್ವೆ, ನಕ್ಷೆ ಮೊದಲಾದ ಅಗತ್ಯ ಕೆಲಸಗಳಿಗಾಗಿ ತಿಂಗಳುಗಟ್ಟಲೆ ಕಂದಾಯ ಇಲಾಖೆಗೆ ಅಲೆಯುವ ಸ್ಥಿತಿ ಇದ್ದು,ಇದನ್ನು ಈಗ ಸಂಪೂರ್ಣ ಬದಲಾಯಿಸಲಾಗಿದೆ.
ಆಧುನಿಕ ತಂತ್ರಜ್ಞನಾದ ನೆರವು ಪಡೆದ ಮುನಿಶ್ ಮೌದ್ಗಿಲ್, ಜನ ಸಾಮಾನ್ಯರು ತಮ್ಮ ಮನೆ ಬಾಗಿಲಲ್ಲೇ ಈ ಸೇವೆಗಳನ್ನು ಪಡೆಯುವಂತಹ ವ್ಯವಸ್ಥೆ ರೂಪಿಸಿದ್ದಾರೆ. ಈಗ ಇದರ ಸಾಲಿಗೆ ಮತ್ತೊಂದು ಸೇವೆ ಸೇರ್ಪಡೆಯಾಗಿದೆ ಅದೇ ಸ್ವಾವಲಂಬಿ..
ಇಲ್ಲಿಯವರೆಗೆ ನಾಗರಿಕರು ಅವರ ಸ್ವಂತ ಜಮೀನಿನ ನಕ್ಷೆಗಾಗಿ ಅರ್ಜಿ ಭೂ ಮಾಪನ ಇಲಾಖೆಗೆ ಸಲ್ಲಿಸಬೇಕು ಇದಾದ ನಂತರ ಆಸ್ತಿ ಭಾಗ ಮಾಡಲು ಸರ್ವೆ ನಡೆಸಿ, ಸ್ಕೆಚ್ ಮಾಡಿ, ನೋಂದಣಿ ಮಾಡಿ ಪಹಣಿ ಪಡೆಯಲು ಕನಿಷ್ಠ 6 ತಿಂಗಳಿಂದ ಒಂದು ವರ್ಷ ಬೇಕಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಖಾಸಗಿ ಜಮೀನುಗಳಲ್ಲಿ ಸ್ಕೆಚ್‍ಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವ ಪರವಾನಿಗೆ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ. ಆದರೆ ಇಲಾಖೆಯಲ್ಲಿ ಸರ್ಕಾರಿ ಭೂಮಾಪಕರು ಮತ್ತು ಪರವಾನಿಗೆ ಭೂಮಾಪಕರ ಸಂಖ್ಯೆಯು ಸೀಮಿತವಾಗಿದೆ. ಹೀಗಾಗಿ ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇಲಾಖೆಯ ವಿರುದ್ಧ ಪಕ್ಷಪಾತ, ಭ್ರಷ್ಟಾಚಾರ ಆರೋಪಗಳು ಸಾಮಾನ್ಯವಾಗಿದ್ದವು.
ಸರ್ವೆ, ನಕ್ಷೆ, ಮತ್ತು ಹಿಸ್ಸೆಗಾಗಿ ಇಲಾಖೆಗೆ ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗುತ್ತವೆ. ಹೀಗಾಗಿ ನಾಗರಿಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್‍ಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ನೀಡಲು ನಾಗರಿಕರೇ ತಮ್ಮ ಜಮೀನಿಗೆ ಸ್ವಂತ ನಕ್ಷೆ ಮಾಡಿಕೊಳ್ಳಲು ಮುನಿಶ್ ಮೌದ್ಗಿಲ್ ವಿಶೇಷ ಆಸಕ್ತಿವಹಿಸಿ ರೂಪಿಸಿರುವ ಯೋಜನೆಯೇ ಸ್ವಾವಲಂಬಿ.
ಎನು ಇದು ಅಂತಿರಾ.. ಭೂ ಮಾಪನ ಇಲಾಖೆ ಸ್ವಾವಲಂಬಿ’ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದೆ.
ಇದರ ಮೂಲಕ ನಾಗರಿಕರೇ ತಮ್ಮ ಜಮೀನಿಗೆ ಸ್ವಂತ ನಕ್ಷೆ ಮಾಡಿಕೊಳ್ಳಬಹುದಾಗಿದೆ. 11ಇ ಸ್ಕೆಚ್, ತತ್ಕಾಲ ಪೋಡಿ ಇವುಗಳನ್ನು ಜನರು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ.ಈ ಆ್ಯಪ್ ನಿರ್ವಹಣೆ ಗೊತ್ತಿದ್ದರೆ ಸ್ವತಃ ತಾವೇ ರೆವಿನ್ಯೂ ಸ್ಕೆಚ್ ತಯಾರಿಸಬಹುದು, ಇಲ್ಲವೇ ಬಲ್ಲವರಿಂದ ಸ್ಕೆಚ್ ಸಿದ್ಧಪಡಿಸಿಕೊಳ್ಳಬಹುದಾಗಿದೆ.ಆ್ಯಪ್ ಮೂಲಕ ಅದಕ್ಕೆ ತಕ್ಕಂತೆ ಸ್ಥಳದಲ್ಲೇ ಸ್ಕೆಚ್ ಮಾಡಬಹುದು.
ಇದಕ್ಕಾಗಿ ಸರ್ವೇಯರ್‌ಗಳನ್ನು ಕರೆಸಬೇಕಾಗಿಲ್ಲ. ಸ್ಕೆಚ್ ಸಿದ್ಧಪಡಿಸಿದ ಬಳಿಕ ಭೂದಾಖಲೆಗಳ ಕಚೇರಿಗೆ ಅಪ್‌ಲೋಡ್ ಮಾಡಬೇಕು.ಕಂದಾಯ ಇಲಾಖೆ ‘ ನಂತರ ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್‌ನ ಗಡಿಗಳಿಗೆ (ಬೌಂಡರಿ) ಅನುಗುಣವಾಗಿ ನೋಂದಣಿ ಮಾಡಲಾಗುತ್ತದೆ.
ಒಟ್ಟಾರೆಯಾಗಿ, 11ಇ ಸ್ಕೆಚ್, ತತ್ಕಾಲ ಪೋಡಿ ಇವುಗಳನ್ನು ಜನರು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡಿರುವುರಿಂದ ಸರ್ವೇ ವಿಳಂಬವಾಗಿ, ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ನಿವಾರಣೆಯಾಗುವ ಮೂಲಕ ಇಲಾಖೆ ಜನಸ್ನೇಹಿಯಾಗಿ ಪರಿವರ್ತನೆಯಾಗಿದೆ.