ಬೆಂಗಳೂರು,ಜು.29-ಲಿಫ್ಟ್ ನಲ್ಲಿ ತ್ರಿವಳಿ ತಲಾಖ್ ಹೇಳಿದ ಪತಿಯ ವಿರುದ್ಧ ಪತ್ನಿಯು ಸುದ್ದುಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಹಮ್ಮದ್ ಅಕ್ರಂ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು ಮನೆಯವರು ಅಕ್ರಂಗೆ ಒಟ್ಟು 30 ಲಕ್ಷ ವಸ್ತುಗಳನ್ನ ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಹಣದಾಹಿಯಾಗಿದ್ದ ಅಕ್ರಂ ಇನ್ನೂ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸರಗೊಂಡ ಪತ್ನಿ ತಸ್ಮಿಯಾ ಹುಸೇನಿ ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ಅಕ್ರಂ ರಂಜಾನ್ ಹಬ್ಬಕ್ಕೆ ತೆರಳಿದ ವೇಳೆ 10 ಲಕ್ಷ ಹಣ ತರಲು ಹೇಳಿದ್ದ. ಹಣ ತರದಿದ್ದಲ್ಲಿ ಮನೆಗೆ ಸೇರಿಸೋದಿಲ್ಲ ಎಂದು ಫೋನ್ ಮಾಡಿದ್ದ. ಇದಾದ ಬಳಿಕ ಕೆಲ ದಿನಗಳ ನಂತರ ಅಪಾರ್ಟ್ ಮೆಂಟ್ ಗೆ ತನ್ನನ್ನು ಕರೆಸಿಕೊಂಡಿದ್ದ. ಹಣ ನೀಡಿಲ್ಲ ಅಂದ್ರೆ ಮಂಗಳಸೂತ್ರ ಬಿಚ್ಚಿ ಕೊಡುವಂತೆ ಹೇಳಿದ್ದ. ಇದಕ್ಕೆ ಒಪ್ಪದಿದ್ದಾಗ ತಲಾಖ್ ಹೇಳಿದ್ದ. ಅಪಾರ್ಟ್ ಮೆಂಟ್ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಮೂರು ಬಾರಿ ತಲಾಖ್ ಹೇಳಿ ಪತ್ನಿಯನ್ನ ಹೊರ ದಬ್ಬಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ತ್ರಿಬಲ್ ತಲಾಖ್ ಕಾನೂನು ವಿರೋಧಿಯಾಗಿದ್ದರೂ ಷರಿಯತ್ ಕಾನೂನಿನ ಈ ನಿಯಮವನ್ನು ಕೆಲವರು ಈಗಲೂ ಅನುಸರಿಸುತ್ತಿದ್ದಾರೆ. ಷರಿಯತ್ ಕಾನೂನಿನನ್ವಯ ಮೂರು ಬಾರಿ ತಲಾಖ್ ಹೇಳಿದರೆ ವಿಚ್ಛೇದನ ನೀಡಿದಂತೆ. ಈ ರೀತಿ ತ್ರಿವಳಿ ತಲಾಖ್ ನೀಡಿ ಪತಿ ಹೊರಟು ಹೋಗಿದ್ದ. ಸದ್ಯ ಪತಿ ಅಕ್ರಂ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.