ಬಹಳ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಸುದೀಪ್ ನಾಯಕತ್ವದ ವಿಕ್ರಾಂತ್ ರೋಣ ಸಿನೆಮ ಒಂದು ರೀತಿಯಲ್ಲಿ ಯಶ್ ಸಾರಥ್ಯದ ಕೆಜಿಎಫ್ ಸಿನೆಮಕ್ಕೆ ಸೆಡ್ಡು ಹೊಡೆಯಲೇ ಬರುತ್ತಿದೆ ಎನ್ನುವಂತೆ ಬಿಂಬಿತವಾಗಿತ್ತು. ದುಬೈನ ಬುರ್ಜ್ ಖಲೀಫಾದಲ್ಲಿ ನಡೆದ ಪ್ರಚಾರ ಪ್ರಸಂಗದಿಂದ ಹಿಡಿದು ಹಾಡುಗಳ ಬಿಡುಗಡೆಯ ತನಕ ವಿಕ್ರಾಂತ್ ರೋಣ ಒಂದು ಅದ್ಬುತ ಸಿನೆಮವಾಗಿ ಹೊರಬರಲಿದೆ ಎಂಬಂತಹ ಮಾತು ಎಲ್ಲ ಕಡೆ ಕೇಳಿ ಬರುತ್ತಿತ್ತು. ಸಿನೆಮದ ಬಗ್ಗೆ ಅನೇಕ ಕುತೂಹಲಗಳಿದ್ದರೂ, ಈ ಸಿನೆಮ ಏನು? ಯಾವುದರ ಬಗ್ಗೆ? ಇದರ ಕಥಾಹಂದರವೇನು? ಎನ್ನುವ ಪ್ರಶ್ನೆಗಳಿದ್ದವು. ಅಚಾನಕ್ ಆಗಿ ವಿಪರೀತ ಯಶಸ್ಸು ಕಂಡ ರಂಗಿತರಂಗ ಸಿನೆಮದ ನಿರ್ದೇಶಕ ಅನೂಪ್ ಭಂಡಾರಿ ಇನ್ನೊಂದು ತರದ ಸಿನಿಮಿಯ ಮ್ಯಾಜಿಕ್ ಮಾಡಿ ಬಿಡುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ, ಶುಕ್ರವಾರ ಬಿಡುಗಡೆಯಾದ ವಿಕ್ರಾಂತ್ ರೋಣ ಸುದೀಪ್ ಅಭಿಮಾನಿಗಳನ್ನೇ ಆತಂಕಕ್ಕೆ ದೂಡಿಬಿಟ್ಟಿದೆ. ಈ ಸಿನೆಮಾದಿಂದ ಸ್ಟಾರ್ ವ್ಯಾಲ್ಯುಗೆ ಧಕ್ಕೆ ಆಗಿರುವುದು ಖಂಡಿತ ಎಂದು ಅನೇಕ ಮಂದಿ ಹೇಳುತ್ತಿದ್ದಾರೆ. ಏನೋ ಅಬ್ಬರಿಸುವ ಸಿನೆಮ ಮಾಡಲು ಹೋಗಿ ಮುಗ್ಗರಿಸಿದ ಹಾಗೆ ಕಂಡು ಬರುತ್ತಿದೆ ಎಂದು ಸಿನೆಮ ವಿಶ್ಲೇಷಕರು ಹೇಳುತ್ತಿದ್ದಾರೆ. ನಾಯಕ ನಾಯಕಿಗೆ ಹೊಂದಾಣಿಕೆಯೇ ಇಲ್ಲ, ಕತೆಗೂ ನಿರೂಪಣೆಗೂ ಸಂಬಂಧವೇ ಇಲ್ಲ ಮತ್ತು ಹಾಗೆ ಹೇಳಬೇಕೆಂದರೆ ಈ ಸಿನೆಮ ರಂಗಿತರಂಗದ ಪುನರಾವರ್ತನೆ ಎಂದು ಹೇಳಲಾಗುತ್ತಿದೆ.
ಸುದೀಪ್ ನಟನಾ ಕೌಶಲ್ಯ ಮೆಚ್ಚುವವರು ಈ ಸಿನೆಮವನ್ನು ಒಂದು ಮಟ್ಟದ ತನಕ ಸಹಿಸಿಕೊಳ್ಳಬಹುದು. ಇಲ್ಲದಿದ್ದರೆ, ಇದು ಹಣ ಪೋಲು ಮಾಡಲೆಂದೇ ನಿರ್ಮಾಣವಾದ ಸಿನೆಮ ಎಂದು ಕೆಲವರು ದೂಷಿಸುತ್ತಿದ್ದಾರೆ. ಈ ಸಿನೆಮದ ಬಗ್ಗೆ ಕೆಟ್ಟ ವಿಮರ್ಶೆ ಮಾಡುವವರು ಸುದೀಪ್ ವಿರೋಧಿಯೆಂದೇ ಬಿಂಬಿತವಾಗಿರುವ ದರ್ಶನ್ ಅಭಿಮಾನಗಳು ಎಂಬ ಆರೋಪವೂ ಕೇಳಿಬರುತ್ತಿದೆ. ಒಳ್ಳೆಯ ಅಭಿನಯಕ್ಕೆ ಹೆಸರಾದ ಸುದೀಪ್ ಇಂಥ ಸಿನೆಮವನ್ನು ಯಾತಕ್ಕಾಗಿ ಒಪ್ಪಿಕೊಂಡರು ಎನ್ನುವ ಪ್ರಶ್ನೆಯೂ ಎದ್ದಿದೆ. ವಿಕ್ರಾಂತ್ ರೋಣ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಸಿನೆಮದ ಹಿಂದಿ ಅವತರಣಿಕೆಯನ್ನು ವಿಪರೀತವಾಗಿ ಗೇಲಿ ಮಾಡಲಾಗಿದೆ. ಈ ಸಿನೆಮಾದ ಹಿಂದಿ ಭಾಷೆ ಮರಾಠಿಯವರು ಮಾತನಾಡಿದ ಶೈಲಿಯಲ್ಲಿದೆ ಮತ್ತು ಹಿಂದಿಯಲ್ಲಿ ಮಾತನಾಡಿ ಹಿಂದಿಯ ನೇಟಿವಿಟಿಗೆ ಸಂಬಂಧವೇ ಇಲ್ಲದಂತೆ ಸನ್ನಿವೇಶಗಳನ್ನು ತೋರಿಸಲಾಗಿದೆ ಎಂದು ಹೇಳಲಾಗಿದೆ. ಒಂದಿಷ್ಟೂ ಮನರಂಜನೆ ಇಲ್ಲದೇ ಬರೀ ಆಡಂಬರವೇ ಹೆಚ್ಚಿದೆ. ಜಾಕ್ವೆಲಿನ್ ಫೆರ್ನಾಂಡೀಸ್ ಅವರ ಐಟಂ ಸಾಂಗ್ ಕೂಡ ವ್ಯಾಯಾಮದ ರೀತಿಯಲ್ಲಿದೆ ಎಂದು ಆರೋಪ ಮಾಡಲಾಗಿದೆ. ಈ ಮಟ್ಟಕ್ಕೆ ಕೆಟ್ಟ ವಿಮರ್ಶೆಗೆ ಪಾತ್ರವಾದ ವಿಕ್ರಾಂತ್ ರೋಣ ಸಿನೆಮ ಅನೇಕ ಪತ್ರಿಕೆಗಳಲ್ಲಿ 1.5ಸ್ಟಾರ್ ತನಕ ಕೆಳಮಟ್ಟದ ಮೌಲ್ಯಮಾಪನಕ್ಕೆ ಗುರಿಯಾಗಿದೆ.
ಈ ರೀತಿಯ ವಿಮರ್ಶೆ ಮತ್ತು ಸಾರ್ವಜನಿಕ ಅಭಿಪ್ರಾಯಗಳು ಹೇಗೆ ಸುದೀಪ್ ಅವರ ಸಿನೆಮ ಭವಿಷ್ಯಕ್ಕೆ ಪ್ರಭಾವ ಬೀರಬಹುದು ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಟೀಕೆಗಳನ್ನು ಅಷ್ಟೊಂದು ಸುಲಭವಾಗಿ ಸ್ವೀಕರಿಸದ ಸುದೀಪ್ ಇಷ್ಟೊಂದು ವ್ಯಾಪಕವಾಗಿ ಬಂದಿರುವ ಟೀಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ವಿಶ್ಲೇಷಕ : ನಕ್ಷತ್ರಿಕ