ಬೆಂಗಳೂರು : ಬೆಳಗಾವಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ವಿಧ್ವಂಸಕ್ಕೆ ಸಂಚು ರೂಪಿಸುತ್ತಿದ್ದ ಪಾತಕಿಯ ಹೆಡೆಮುರಿ ಕಟ್ಟಿದ್ದಾರೆ.
ಹಿಂದೂ ಸಂಘಟನೆಗಳು, ಹಿಂದೂಪರ ನಾಯಕರ ಮೇಲೆ ಸೇಡು ತೀರಿಸಿಕೊಳ್ಳುವ ಹುನ್ನಾರ ಹಾಗು ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಳಗಾವಿಯ ಕಾಗೆವಾಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಬಂಧಿತ ದೆಹಲಿ ಮೂಲದ ರೆಹಮಾನ್ ಸಿದ್ದೀಕಿ ಎಂಬ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದು ಹಿಂದೂಪರ ಸಂಘಟನೆಗಳು ಮತ್ತು ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಕುರಿತಾಗಿ ಚರ್ಚೆ ನಡೆಸಿ ಅದಕ್ಕೆ ಪೂರಕವಾಗಿ ಕೆಲವು ಚಟುವಟಿಕೆಗಳನ್ನು ನಡೆಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಾಗೆವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಇಂದಿರಾನಗರ ನಿವಾಸಿ ತೌಸಿಫ್ ದೊಂಡಿ (21) ಬಂಧಿತ. ಈತ ದೆಹಲಿಯ ರೇಹಾನ್ ಅಹ್ಮದ್ ಸಿದ್ದಿಕಿಯ ಜತೆಗೆ ಸಂಪರ್ಕದಲ್ಲಿದ್ದ. ರೇಹಾನ್ ಹೆಸರೂ ಕೃತ್ಯದಲ್ಲಿದೆ. ಆದರೆ ಆತನ ಬಂಧನದ ವಿಷಯ ಖಚಿತವಾಗಿಲ್ಲ. ಜುಲೈ 31ರಂದೇ ಕಾಗೆವಾಡ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಇಬ್ಬರೂ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ‘ಬಾಂಬ್ ತಯಾರಿಸುವುದನ್ನು ಕಲಿಯಿರಿ, ಎಂದು ಮಾಹಿತಿ ನೀಡುವುದು. ತಂಡ ಕಟ್ಟಿಕೊಂಡು ಹಳ್ಳಿಗಳಲ್ಲಿ ಮುಸ್ಲಿಂ ಯುವಕರನ್ನು ಗುಂಪುಗೂಡಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡುವಲ್ಲಿ ನಿರತರಾಗಿದ್ದರು ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ಶಿರಗುಪ್ಪಿಯ ತೌಸಿಫ್ ದೊಂಡಿ ಜಿಲ್ಲೆಯ ವಿವಿಧ ಗ್ರಾಮಗಳು, ಸುತ್ತಮುತ್ತಲು ಹಳ್ಳಿಗಳಲ್ಲಿ ಓಡಾಡಿ ಯುವಕರನ್ನು ಕೋಮುದ್ವೇಷಕ್ಕೆ ಪ್ರಚೋದಿಸುತ್ತಿದ್ದ. ಭಾರತದಲ್ಲಿ ಮುಸ್ಲಿಮರ ಮೇಲೆ ಅನ್ಯಾಯವಾಗುತ್ತಿದೆ. ನಮ್ಮ ಬಾಬರಿ ಮಸೀದಿ ದ್ವಂಸ ಮಾಡಿದ್ದಾರೆ. ನೂಪುರ್ ಶರ್ಮಾರಂತಹ ಹಿಂದೂ ಸಂಘಟನೆಯ ಮುಖಂಡರ ಹೇಳಿಕೆ ಇದಕ್ಕೆ ಸಾಕ್ಷಿ. ಅಲ್ಲದೇ ರಾಜ್ಯದಲ್ಲಿ ಹಿಜಾಬ್ ಧರಿಸುವ ವಿಷಯವಾಗಿ ಮುಸ್ಲಿಂ ಯುವತಿಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತನ್ನಷ್ಟಕ್ಕೆ ತಾನೇ ಭಾವಿಸಿಕೊಂಡು ಮುಸ್ಲಿಮರನ್ನು ಉದ್ರೇಕಗೊಳಿಸುತ್ತಿದ್ದ. ಸಮಾಜದಲ್ಲಿ ಗಲಾಟೆ ಉಂಟು ಮಾಡುವಂಥ ಚಟುವಟಿಕೆಗಳನ್ನು ಮಾಡುತ್ತಿದ್ದ ಎಂದು ಐಫ್ಐಆರ್ ನಲ್ಲಿ ತಿಳಿಸಲಾಗಿದೆ.
ತೌಸಿಫ್ ದೊಂಡಿಯ ಸಾಮಾಜಿಕ ಜಾಲತಾಣದ ಪೋಸ್ಟಗಳನ್ನು ನೋಡಿದ ದೆಹಲಿ ಮೂಲದ ರೇಹಾನ್ ಅಹ್ಮದ್ ಸಿದ್ದಿಕಿ ಸಾಮಾಜಿಕ ಜಾಲತಾಣಗಳ ಮೂಲಕವೇ ಈತನನ್ನು ಸಂಪರ್ಕಿಸಿದ್ದ.
ಅಲ್ಲದೇ, ತೌಸಿಫ್ ನನ್ನು ಸಿಗ್ನಲ್ ಆ್ಯಪ್ ಮೂಲಕ ‘ಒನ್ ಉಮ್ಮಾಹ್ (One Ummah)’ ಎಂಬ ಹೆಸರಿನ ಗ್ರೂಪಿನಲ್ಲಿ ಇದೇ ರೇಹಾನ್ ಅಹ್ಮದ್ ಸಿದ್ದಿಕಿ ಸೇರಿಸಿದ್ದ.
ಈ ಗ್ರೂಪದಲ್ಲಿ ಹಿಂದೂಗಳ ವಿರುದ್ಧ ಪ್ರತಿಕಾರಕ್ಕಾಗಿ ತಯಾರು ಇರುವಂತೆ ಪೋಸ್ಟ್ ಹಾಕುತ್ತಿದ್ದ.
ಇದರ ಜೊತೆಗೆ, ರೇಹಾನ್ ಕೂಡ ತನ್ನ ಮೊಬೈಲ್ ನಂಬರ್ 7838483767 ನಿಂದ ತೌಸಿಫ್ ಗೆ ಒಂದು ವ್ಯಾಟ್ಸ್ ಆ್ಯಪ್ ಗ್ರೂಪ್ ರಚಿಸಿಕೊಟ್ಟಿದ್ದ. ಈ ಗ್ರೂಪಿನಲ್ಲಿಯೂ ಕೋಮು ಪ್ರಚೋದನೆಗೆ ಬೇಕಾದ ಚರ್ಚೆ ನಡೆಸುತ್ತಿದ್ದರು.
‘ಒಂದು ಗ್ರೂಪ್ ರಚಿಸಿಕೊ. ನೀನು ಬಲಾಢ್ಯನಾಗಬೇಕು. ಅಂತರ್ಜಾಲ ನೋಡಿ ಬಾಂಬ್ ತಯಾರಿಕೆ ಹಾಗು ಇತರೆ ಆಯುಧಗಳನ್ನ ತಯಾರಿಸುವುದನ್ನು ಕಲಿತುಕೊಳ್ಳಬೇಕು. ಒಂದು ಗುಂಪುನ್ನು ಕಟ್ಟಿಕೊಂಡು ರೆಡಿಯಾಗಿ. ಸಮಯ ಬಂದಾಗ ಉಪಯೋಗಕ್ಕೆ ಬರುತ್ತದೆ. ನಾನು ನಿಮ್ಮನ್ನು ಬೇರೊಂದು ಸ್ಥಳಕ್ಕೆ ಕರೆಯಿಸಿಕೊಳ್ಳುತ್ತೇನೆ’ ಎಂದು ರೇಹಾನ್ ಹೇಳಿದ್ದ. ಜತೆಗೆ, ಮೊಬೈಲ್ ಗ್ರೂಪ್ ಕಾಲ್ ಮತ್ತು ಗೂಗಲ್ ಮೀಟ್ ಮೂಲಕವೂ ಇದನ್ನೇ ಮಾತನಾಡಿದ್ದ ಎಂದೂ ಪೊಲೀಸರು ದಾಖಲಿಸಿಕೊಂಡ ದೂರಿನಲ್ಲಿದೆ.
ರೇಹಾನ್ ಅಹ್ಮದನ ಮಾತುಗಳಿಂದ ಪ್ರಭಾವಿತಗೊಂಡಿದ್ದ ತೌಸಿಫ್; ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಶ್ರೀರಾಮ ಸೇನೆ ಮುಂತಾದ ಹಿಂದೂ ಸಂಘಟನೆಗಳ ವಿರುದ್ಧ ದ್ವೇಷ ಬೆಳೆಸಿಕೊಂಡು, ಒಂದಾಗಿ ಹೋರಾಡಲು ಮುಸ್ಲಿಂ ಸಮಾಜದ ಜನರಿನ್ನು ಎತ್ತಿಕಟ್ಟುತ್ತಿದ್ದ. ಕೋಮು ಪ್ರಚೋದಕ ಹೇಳಿಕೆ ಮತ್ತು ಪೋಸ್ಟ್ ಗಳನ್ನು ಹಾಕುತ್ತ ಹಿಂದೂ- ಮುಸ್ಲಿಂ ಗಲಾಟೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಬಗ್ಗೆ ಸಂಚು ರೂಪಿಸುತ್ತಿದ್ದ. ಹೀಗಾಗಿ ಪೊಲೀಸರು ಕಳೆದ ಹಲವು ದಿನಗಳಿಂದ ಈತನ ಚಲನವಲನಗಳನ್ನು ಗಮನಿಸುತ್ತಿದ್ದರು. ತೌಸಿಫ್ ಈ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ ಎಂದೂ ತಿಳಿಸಲಾಗಿದೆ.
ಇವರಿಬ್ಬರ ಮೇಲೆ ಐಪಿಸಿ ಸೆಕ್ಷನ್ 1860 (U/S 120B, 153, 153A, 34) ಅಡಿ ದೂರು ದಾಖಲಿಸಲಾಗಿದೆ.