ದಾವಣಗೆರೆ: ರಾಜ್ಯ ಕಾಂಗ್ರೆಸ್ ನಾಯಕರೆಲ್ಲಾ ಒಟ್ಟಾಗಿದ್ದೇವೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕರ್ನಾಟಕದಲ್ಲಿ ಒಂದು ಭ್ರಷ್ಟ, ಕೋಮುವಾದಿ ಸರ್ಕಾರ ಇದೆ. ಈ ಭ್ರಷ್ಟ, ಕೋಮುವಾದಿ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ತಮ್ಮ ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿದ್ದ ಅಮೃತ ಮಹೋತ್ಸವದಲ್ಲಿ ಅಭಿಮಾನಿಗಳು ಕಾರ್ಯಕರ್ತರ ಸಮ್ಮುಖದಲ್ಲಿ ಅಭಿನಂದನೆ ಮತ್ತು ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾನು ಮತ್ತು ಶಿವಕುಮಾರ್ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪದೇ ಪದೇ ಪುನರುಚ್ಚರಿಸಿದರು.
ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಅನೇಕ ಬಾರಿ ವಿರೋಧ ಪಕ್ಷದವರು ಜನರಿಗೆ ತಪ್ಪು ಮಾಹಿತಿಯನ್ನು ಕೊಡುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ದೊಡ್ಡ ಬಿರುಕಿದೆ ಅಂತ. ಈ 75ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಕ್ಕೆ ಡಿ.ಕೆ.ಶಿವಕುಮಾರ್ ಅವರ ವಿರೋಧವಿದೆ. ನಾನು ಹೇಳುತ್ತೇನೆ. ವಿರೋಧ ಪಕ್ಷದವರ ಭ್ರಮೆ ಮತ್ತು ಕೆಲವು ಮಾಧ್ಯಮಗಳ ಸೃಷ್ಟಿ ಅನ್ನುವಂತಹ ಮಾತಗಳನ್ನು ಹೇಳುವುದಕ್ಕೆ ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ಎಲ್ಲಿಯವರೆಗೂ ದೈಹಿಕವಾಗಿ, ಮಾನಸಿಕವಾಗಿ ಸದೃಢನಾಗಿರುತ್ತೇನೆ ಅಲ್ಲಿಯವರೆಗೂ ಕೂಡ ಸಕ್ರಿಯ ರಾಜಕಾರಣ ಮಾಡಿ, ಈ ನಾಡಿನ ಸೇವೆ ಮಾಡುತ್ತೇನೆ ಎಂದು ಘೋಷಿಸಿದರು.
ಕಾಕಾತಾಳೀಯ ಎಂಬಂತೆ 2022 ಆಗಸ್ಟ್ 15ಕ್ಕೆ ನಮಗೆ ಸ್ವಾತ್ರಂತ್ಯ ದೊರಕಿ 75 ವರ್ಷಗಳು ತುಂಬುತ್ತಿವೆ. ಈ ವರ್ಷ ಇಡೀ ದೇಶದಲ್ಲಿ ಸ್ವಾತ್ರಂತ್ಯದ ಅಮೃತ ಮಹೋತ್ಸವ ಮಾಡುತ್ತಿದ್ದೇವೆ. ನಾನು ಕರ್ನಾಟಕದ ಜನರಿಗೆ ಮತ್ತು ದೇಶದ ಜನರಿಗೆ ನಿಮ್ಮೆಲ್ಲರಿಗೂ ಸ್ವಾತ್ರಂತ್ಯದ ಅಮೃತೋತ್ಸವದ ಶುಭಾಶಯ ಕೋರಲಿಕ್ಕೆ ಬಯಸುತ್ತೇನೆ ಎಂದರು.
ಇವತ್ತಿಗೆ ನನಗೆ 75 ವರ್ಷಗಳು ತುಂಬುತ್ತಿವೆ. ನಾನು ಈ ಹಿಂದೆ ಎಂದೂ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಪಕ್ಷದ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ನಿಮಗೆ 75 ವರ್ಷ ತುಂಬುತ್ತಿದೆ. ಕಳೆದ 44 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೀರಿ ಇದೆಲ್ಲದರ ನೆನೆಪಿಗಾಗಿ 75 ವರ್ಷದ ಹುಟ್ಟುಹಬ್ಬ ಆಚರಣೆ ಮಾಡಬೇಕೆಂದು ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಮಣಿದು 75ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಕ್ಕೆ ಒಪ್ಪಿ ಇವತ್ತು ಇಲ್ಲಿ ನಿಂತಿದ್ದೇನೆ. ನಿಮ್ಮೆಲ್ಲರ ಶುಭಾಶಯಗಳನ್ನು, ಆರ್ಶೀವಾದಗಳನ್ನು ಬಯಸುತ್ತಿದ್ದೇನೆ ಎಂದು ಮನವಿ ಮಾಡಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿಯವರು. ನಾನು ಯಾರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೂ ಹೋಗಿಲ್ಲ ಅಂದರು. ಆದರೆ, ಸಿದ್ದರಾಮಯ್ಯನವರ ಮೇಲೆ ವಿಶೇಷ ಪ್ರೀತಿ ಇರುವುದರಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ನಾನು ರಾಹುಲ್ ಗಾಂಧಿಯವರಿಗೆ ಕೋಟಿ-ಕೋಟಿ ನಮನಗಳನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ ಎಂದರು.
ರಾಹುಲ್ ಗಾಂಧಿಯವವರು ನಾನು ಕಾಂಗ್ರೆಸ್ ಸೇರಿದ ದಿನದಿಂದ ಇವತ್ತಿನವರೆಗೂ ಕೂಡ ನನ್ನ ಮೇಲೆ ಅಪಾರವಾದಂತಹ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ನಾನು ಬೇರೆ ಪಾರ್ಟಿಯಿಂದ ಬಂದವನಾದರೂ ಕೂಡ ಇವತ್ತು ನೆನೆದುಕೊಳ್ಳಬೇಕಾಗುತ್ತದೆ. ರಾಹುಲ್ ಗಾಂಧಿಯವರು, ಸೋನಿಯಾ ಗಾಂಧಿಯವರು ನಾನು ಮುಖ್ಯಮಂತ್ರಿಯಾಗುವುದಕ್ಕೆ ಕಾರಣೀಕರ್ತರು ಅನ್ನುವುದನ್ನು ನೆನೆದುಕೊಳ್ಳಬೇಕಾಗುತ್ತದೆ.
ನಾನು ಮುಖ್ಯಮಂತ್ರಿಯಾಗಿದ್ದಾಗ 5 ವರ್ಷಗಳ ಕಾಲ ಬಂಡೆಯಂತೆ ನನಗೆ ಎಲ್ಲಾ ರೀತಿ ಸಹಕಾರವನ್ನು ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿಯವರು ಕೊಟ್ಟಿದ್ದಾರೆ ಅನ್ನುವಂತಹದ್ದನ್ನು ಇವತ್ತು ನಾನು ನೆನಪು ಮಾಡಿಕೊಳ್ಳುವುದಕ್ಕೆ ಬಯಸುತ್ತೇನೆ ಎಂದು ಹೇಳಿದರು.
ನಾನು ಸಕ್ರಿಯ ರಾಜಕಾರಣದಲ್ಲಿ ಸುಮಾರು 50 ವರ್ಷಗಳ ಕಾಲ ಈ ನಾಡಿನ ಜನರ ಜೊತೆ ಇದ್ದೇನೆ. 1972ನೇ ಇಸವಿ ಆಗಸ್ಟ್ ತಿಂಗಳು. ನಾನು ವಕೀಲನಾದೆ. ಅದಾದ ಮೇಲೆ 1978ರಲ್ಲಿ ತಾಲೂಕು ಅಭಿವೃದ್ದಿ ಮಂಡಳಿ ಸದಸ್ಯನಾದೆ. 83ರಲ್ಲಿ ಶಾಸಕನಾದೆ. 84ರಲ್ಲಿ ಮಂತ್ರಿಯಾದೆ. ಅಂದಿನಿಂದ ಇವತ್ತಿನವರೆಗೆ ನಿರಂತರವಾಗಿ ರಾಜ್ಯದ ಜನರ ಸಂಪರ್ಕವನ್ನು ಇಟ್ಟುಕೊಂಡು ಜನಸೇವೆಯನ್ನು ಮಾಡುವಂತಹ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಅನ್ನುವಂತಹ ಮಾತನ್ನು ಈ ರಾಜ್ಯದ ಜನರಿಗೆ ಹೇಳುವುದಕ್ಕೆ ಬಯಸುತ್ತೇನೆ ಎಂದು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಬಹಳ ದೊಡ್ಡದು. ಜನಶಕ್ತಿಯ ಆದರ್ಶವಾದ ಇಲ್ಲದೇ ಹೋದರೆ ಯಾರೂ ಕೂಡ ದೀರ್ಘವಾದ ಆಡಳಿತ ಮಾಡುವುದಕ್ಕೆ ಸಾಧ್ಯವಿಲ್ಲ. ಜನ ಸೇವೆ ಮಾಡುವುದಕ್ಕೆ ಸಾಧ್ಯವಾಗಲ್ಲ. ಜನರ ನಿರಂತರವಾದ ಪ್ರೀತಿ, ವಿಶ್ವಾಸ ಆಶೀರ್ವಾದಿಂದ ಇವತ್ತು ನಾನು ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕನ್ನಡ ಜನರ ಸೇವೆ ಮಾಡುವಂತಹ ಅವಕಾಶ ಸಿಕ್ಕಿರುವುದಕ್ಕೆ ಇಡೀ ಕರ್ನಾಟಕದ ಜನರಿಗೆ ನಾನು ನಮಸ್ಕಾರ ಹೇಳುತೇನೆ ಎಂದು ಕೃತಜ್ಞತೆ ಅರ್ಪಿಸಿದರು.
ಎಲ್ಲಿಯವರೆಗೂ ದೈಹಿಕವಾಗಿ, ಮಾನಸಿಕವಾಗಿ ಸದೃಢನಾಗಿರುತ್ತೇನೆ ಅಲ್ಲಿಯವರೆಗೂ ಕೂಡ ಸಕ್ರಿಯ ರಾಜಕಾರಣ ಮಾಡಿ, ಈ ನಾಡಿನ ಸೇವೆ ಮಾಡುತ್ತೇನೆ ಎಂದು ಘೋಷಿಸಿದರು.
ಎಚ್ಚರಿಕೆಯಿಂದ ಇರಿ:
ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಬಿಜೆಪಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ ಇಂತಹ ಒಡೆಯುವ ಶಕ್ತಿಯ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ನಡೆಯುತ್ತಿರುವ ಭ್ರಷ್ಟಚಾರವನ್ನು ಸಂಪೂರ್ಣ ಕರ್ನಾಟಕ ನೋಡುತ್ತಿದೆ ಇಂತಹ ಸರ್ಕಾರ ಎಷ್ಟು ಬೇಗ ಹೋಗುತ್ತದೆಯೋ ಅಷ್ಟು ಬೇಗ ಜನರಿಗೆ ಒಳಿತಾಗಲಿದೆ ಎಂದು ಹೇಳಿದರು.
ರಾಜ್ಯದ ಜನ ಇಂದಿಗೂ ಸಿದ್ದರಾಮಯ್ಯ ಸರ್ಕಾರ ನೀಡಿರುವ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೆ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂತಹ ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕವನ್ನು ಪ್ರಪಂಚದ ಭೂಪಟದಲ್ಲಿ ಕಾಣುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ರಾಜ್ಯದ ಮರ್ಯಾದೆಯನ್ನು ಮಣ್ಣು ಪಾಲು ಮಾಡಿದೆ ಎಂದು ಆರೋಪಿಸಿದರು.
ನಾನಿಂದು ಸಂಭ್ರಮದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನನ್ನ ಹಾಗೂ ಸಿದ್ದರಾಮಯ್ಯನವರ ನಡುವೆ ವಿಶೇಷವಾದ ಬಾಂಧವ್ಯವಿದೆ. ಆ ಕಾರಣಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಒಬ್ಬ ವ್ಯಕ್ತಿಯಾಗಿ ನಾನು ಸಿದ್ದರಾಮಯ್ಯ ಅವರನ್ನು ಇಷ್ಟ ಪಡುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ವಿಚಾರಗಳಿಗೆ ನನ್ನ ಸಹ ಮತವಿದೆ. ಐದು ವರ್ಷ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕ ಸರ್ಕಾರವನ್ನು ನಡೆಸಿರುವ ರೀತಿಯ ಬಗ್ಗೆ ನನಗೆ ಹಮ್ಮೆ ಇದೆ. ಕರ್ನಾಟಕದ ಎಲ್ಲಾ ಸಮಸ್ಯೆಯ ಬಗ್ಗೆ ಅವರಿಗೆ ಒಂದು ದೂರದೃಷ್ಟಿ ಇತ್ತು. ಜೊತೆಗೆ ಕರ್ನಾಟಕದ ಎಲ್ಲಾ ಬಡವರ ಬಗ್ಗೆ ಕಾಳಜಿ ಇತ್ತು ಎಂದು ಶ್ಲಾಘಿಸಿದರು.
Previous Articleಸಿದ್ದರಾಮೋತ್ಸವದಲ್ಲಿ ಒಗ್ಗಟ್ಟಿನ ಮಂತ್ರ ಪಠಣ..
Next Article ಅನುಚಿತ ವರ್ತನೆ ಆರೋಪ: ಕಪ್ಪು ನಟ ಚಂದನ್ ಶಾಶ್ವತ ಬ್ಯಾನ್